ಕಂಪ್ಲಿ: ಕೊರೋನಾ ಆರೈಕೆ ಕೇಂದ್ರಕ್ಕೆ ಎಸಿ ಭೇಟಿ, ಪರಿಶೀಲನೆ

ಕಂಪ್ಲಿ, ಮೇ.28: ಪಟ್ಟಣದ ಕಾಕತೀಯ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸರ್ಕಾರದಿಂದ ನಿರ್ಮಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಗುರುವಾರದಂದು ಹೊಸಪೇಟೆಯ ಉಪವಿಭಾಗ ಅಧಿಕಾರಿ ಸಿದ್ದರಾಮೇಶ್ವರ ಅವರು ಭೇಟಿ ನೀಡಿ ಕೊರೋನಾ ಸೋಂಕಿತರಿಗೆ ಒದಗಿಸಲಾದ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಆರೈಕೆ ಕೇಂದ್ರದಲ್ಲಿನ ಸೋಂಕಿತರೊಂದಿಗೆ ಎಸಿ ಸಿದ್ದರಾಮೇಶ್ವರ ಮಾತನಾಡಿ, ಕೊರೋನಾ ಸೋಂಕು ಮಾರಣಾಂತಿಕವೇನಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ, ಸೂಕ್ತ ವೈದ್ಯೋಪಚಾರ ಹಾಗು ವೈದ್ಯರ ಸಲಹೆಗಳನ್ನು ಪಾಲಿಸುವುದರ ಜೊತೆಜೊತೆಗೆ ಆತ್ಮಸ್ತೈರ್ಯದಿಂದ ಸೋಂಕಿನಿಂದ ಮುಕ್ತರಾಗಬಹುದು ಎಂದು ಆತ್ಮಸ್ತೈರ್ಯ ತುಂಬಿದರು. ಕೇಂದ್ರದಲ್ಲಿ ದಿನನಿತ್ಯ ನೀಡುವ ಆಹಾರ ಸೇರಿದಂತೆ ಮೂಲಸೌಕರ್ಯಗಳ ವ್ಯವಸ್ಥೆ ಬಗ್ಗೆ ಸೋಂಕಿತರನ್ನು ವಿಚಾರಿಸಿದರು.
ಇನ್ನು ಯಾರಿಗಾದರೂ ಸೋಂಕಿನ ಲಕ್ಷಣಗಳಿದ್ದಲ್ಲಿ ಉದಾಸೀನ ಮಾಡದೇ ಕೂಡಲೇ ಕೊರೋನಾ ಕೇರ್ ಸೆಂಟರ್ ಅಥವಾ ಕೊರೋನಾ ಆಸ್ಪತ್ರೆಗಳಿಗೆ ದಾಖಲಾಗುವ ಮೂಲಕ ನಿಮ್ಮ ಜೀವ ಹಾಗು ಜೀವನದ ಬಗ್ಗೆ ಕಾಳಜಿ ತೋರಬೇಕಿದೆ ಎಂದು ಅಧಿಕಾರಿಗಳ ಮೂಲಕ ಸಾರ್ವಜನಿಕರಿಗೆ ಸಲಹೆ ಸೂಚನೆ ನೀಡಿದರು.
ತದನಂತರದಲ್ಲಿ ಎಮ್ಮಿಗನೂರು ಗ್ರಾಮದ ಕೊರೋನಾ ಆರೈಕೆ ಕೇಂದ್ರಕ್ಕೂ ಸಹ ಉಪವಿಭಾಗ ಅಧಿಕಾರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ, ಉಪತಹಸೀಲ್ದಾರ್ ಬಿ.ರವೀಂದ್ರ ಕುಮಾರ್, ಕಂದಾಯ ನಿರೀಕ್ಷಕ ಎಸ್.ಗಣೇಶ್, ಕೇಂದ್ರದ ನೋಡಲ್ ಅಧಿಕಾರಿಗಳಾದ ಡಾ.ರಾಧಿಕಾ, ಡಾ.ರೇವಣಸಿದ್ದೇಶ್ವರ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಾದ ಗಿರೀಶ್ ಬಾಬು, ಲಕ್ಷ್ಮಣ್ ನಾಯ್ಕ್, ಮಂಜುನಾಥ, ವಿಜಯಕುಮಾರ್, ಪಿಡಬ್ಲ್ಯುಡಿ ಎಇಇ ದೇವರಾಜ್ ಸೇರಿದಂತೆ ಆರೋಗ್ಯ ಸಿಬ್ಬಂದಿ ಅನೇಕರಿದ್ದರು.