ಕಂಪ್ಲಿ: ಕಾಂಗ್ರೆಸ್ ಗೆ ಗಣೇಶ ಪೈನಲ್
 ಬಿಜೆಪಿಗೆ ಸುರೇಶ್ ಬಾಬು, ಜೆಡಿಎಸ್ ಗೆ ರಾಜುನಾಯಕ್ ಸಾಧ್ಯತೆ


* ತ್ರಿಕೋನ ಸ್ಪರ್ಧೆ ಗ್ಯಾರೆಂಟಿ
*  ಒಬ್ಬೊಬ್ವರನ್ನು ಸೋಲಿಸಲು, ಒಬ್ಬೊಬ್ಬ ನಾಯಕರ ಪಣ
* ನಾರಾಯಣ ರೆಡ್ಡಿಯವರ ಆಶಿರ್ವಾದ ಯಾರಿಗೆ
ಎನ್.ವೀರಭದ್ರಗೌಡ

ಬಳ್ಳಾರಿ:ಮಾ,25- ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರ ಬಂದಿದೆ. ಇದರಿಂದ ಜಿಲ್ಲೆಯ ಕಂಪ್ಲಿ ಕ್ಷೇತ್ರಕ್ಕೆ ಹಾಲಿ ಶಾಸಕ ಜೆ.ಎನ್.ಗಣೇಶ್ ಅವರ ಹೆಸರು ಮತ್ತೊಮ್ಮೆ ಸ್ಪರ್ಧೆಗೆ ಪ್ರಕಟವಾಗಿದೆ. ಈ ಕ್ಷೇತ್ರದ ಟಿಕೇಟ್ ಗಾಗಿ ರಾಜುನಾಯಕ್ ಮತ್ತು ನಾರಾಯಣಪ್ಪ ಪ್ರಯತ್ನಿಸಿದ್ದರು.
ಎಸ್ಟಿ ಮೀಸಲಾತಿಯ ಈ ಕ್ಷೇತ್ರದಲ್ಲಿ  ಹೊರಗಡೆಯಿಂದಲೇ ಬಂದವರೇ ಆಯ್ಕೆಯಾಗುತ್ತಾ ಬಂದಿದ್ದಾರೆ. 2008 ಮತ್ತು 2013 ರಲ್ಲಿ ಬಳ್ಳಾರಿಯ ಮೂಲ ನಿವಾಸಿ ಟಿ.ಹೆಚ್.ಸುರೇಶ್ ಬಾಬು ಆಯ್ಕೆಯಾದರೆ, 2018 ರಲ್ಲಿ  ಹೊಸಪೇಟೆಯ ಮೂಲ ನಿವಾಸಿ ಜೆ.ಎನ್.ಗಣೇಶ್ ಆಯ್ಕೆಯಾದರು. ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು  ಸ್ಥಳೀಯ ರಾಮಸಾಗರದ ನಾರಾಯಣಪ್ಪ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆಧರೆ ಸಿಕ್ಕಿಲ್ಲ. ಗಂಗಾವತಿ ಮೂಲ ನಿವಾಸಿ ರಾಜುನಾಯಕ್ ಸಹ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಸಿಕ್ಕಿಲ್ಲ.
 ಗಣೇಶ್ :
2013 ರಲ್ಲಿ ಕಾಂಗ್ರೆಸ್ ನ ಬಂಡಾಯದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಉತ್ತಮವಾಗಿ ಮತಗಳನ್ನು ಒಡೆದ ಜೆ.ಎನ್.ಗಣೇಶ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ, ನಂತರ ಚುನಾವಣೆಯಲ್ಲೂ ಆಯ್ಕೆಯಾದರು. ಇದಕ್ಕೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಸಹಕಾರವೂ ಇತ್ತು. ಇದನ್ನು ಗಣೇಶ್ ಬಹಿರಂಗವಾಗಿಯೇ ಆಗ ಹೇಳಿದ್ದರು. ಈಗ ನಾರಾಯಣರೆಡ್ಡಿ ಅವರು ಮುನಿಸಿಕೊಂಡಿದ್ದಾರೆ. ಗಣೇಶ್ ಎರಡನೇ ಬಾರಿಗೆ ಶಾಸಕರಾಗಲು ಕಣಕ್ಕಿಳಿಯುತ್ತಿದ್ದಾರೆ. ಮತದಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಗಣೇಶ್ ಅವರು ಮಾತ್ರ ಈ ಬಾರಿಯೂ ನನ್ನದೇ ಗೆಲುವು ಎನ್ನುತ್ತಿದ್ದಾರೆ.
 ಸುರೇಶ್ ಬಾಬು:
ಕ್ಷೇತ್ರ ಪುನರ್ ವಿಂಗಡಣೆಯಿಂದ ರಚನೆಯಾದ ಕಂಪ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ 2008 ರಲ್ಲಿ ಬಿಜೆಪಿಯಿಂದ ಮತ್ತು 2013 ರಲ್ಲಿ ಬಿಎಸ್ ಆರ್ ಪಕ್ಷದಿಂದ  ಟಿ.ಹೆಚ್.ಸುರೇಶ್ ಬಾಬು ಅನಾಯಾಸವಾಗಿ ಗೆದ್ದಿದ್ದರು.
ಆದರೆ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡರು. ಈ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಇನ್ನೂ ಟಿಕೆಟ್ ಘೋಷಣೆಯಾಗಬೇಕಿದೆ.
ನಾರಾಯಣಪ್ಪ:
ಕ್ಷೇತ್ರ ವ್ಯಾಪ್ತಿಯ, ಕಾಂಗ್ರೆಸ್ ಪಕ್ಷದ ಮುಖಂಡ ರಾಮಸಾಗರದ ನಾರಾಯಣಪ್ಪ ಮೊದಲಿಗೆ ಶಾಸಕ ಗಣೇಶ್ ಜೊತೆಯಲ್ಲಿ  ತೊಡಗಿಕೊಂಡಿದ್ದರು. ನಂತರ ಅದ್ಯಾಕೋ ದೂರಾದರು.
ನಾರಾಯಣಪ್ಪ  ಅವರೇ ಹೇಳಿದಂತೆ  ಸ್ಥಳೀಯರಿಗೆ ಟಿಕೆಟ್ ನೀಡಿ ಎಂದು. ನನಗೆ ಮಾಜಿ ಶಾಸಕ ನಾರಾಯಣ ರೆಡ್ಡಿ ಅವರ ಬೆಂಬಲ ಇದೆಂದು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರು. 
ಈಗ ಟಿಕೆಟ್ ಗಣೇಶ್ ಗೆ ಮತ್ತೆ ಸಿಕ್ಕಿರುವುದರಿಂದ ಇಂದು ಬೆಂಬಲುಗರ ಸಭೆ ಕರೆದು, ನಾರಾಯಣ ರೆಡ್ಡಿ ಅವರ ಜೊತೆ ಸಮಾಲೋಚನೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ಬೇರೆ ಪಕ್ಷ ಸೇರುವ ಚಿಂತನೆ ಇಲ್ಲ ಎಂದು ಸಂಜೆವಾಣಿಗೆ ತಿಳಿಸಿದ್ದಾರೆ.
ರಾಜು ನಾಯಕ್:
ರಾಜು ನಾಯಕ್ ಅವರು ಸಹ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಸಂಚರಿಸಿ, ನಾರಾಯಣ ರೆಡ್ಡಿ ಅವರ ಸಲಹೆಯಂತೆ ಕಾಂಗ್ರೆಸ್ ಟಿಕೆಟ್ ಕೋರಿದ್ದೆ ದೊರೆತಿಲ್ಲ. ಇಂದು ಬೆಂಬಲಿಗರ ಸಭೆ ಕರೆದು ಮುಂದಿನ‌ ನಡೆ ಬಗ್ಗೆ  ಸಮಾಲೋಚನೆ ಮಾಡುತ್ತಿರುವೆ. ಬಹುತೇಕ ನಾನು ಸ್ಪರ್ಧೆ ಮಾಡುವುದು ಖಚಿತ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ ಎಂದು ಸಂಜೆವಾಣಿಗೆ ತಿಳಿಸಿದ್ದಾರೆ.
ಜೆಡಿಎಸ್ ನಿಂದ:
ರಾಜುನಾಯಕ್ ಬಹುತೇಕ ಜೆಡಿಎಸ್ ನಿಂದ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಕುರಿತು ಪಕ್ಷದ ಉನ್ನತ ನಾಯಕ ಕುಮಾರಣ್ಣ ಬಳಿ,ಮತ್ತು ಜಿಲ್ಲಾ ನಾಯಕರ ಬಳಿಯೂ ಚರ್ಚೆ ಮಾಡಲಾಗಿದೆಯಂತೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ರಾಜುನಾಯಕ್  ಹೌದು ಎಂದಿದ್ದಾರೆ.
ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದರೂ ನನಗೆ ನಾರಾಯಾಣ ರೆಡ್ಡಿ ಅವರ ಬೆಂಬಲ ಇದ್ದೇ ಇರುತ್ತೆ ಎಂದಿದ್ದಾರೆ.
ಒಟ್ಟಾರೆ ಶಾಸಕ ಗಣೇಶ್ ಅವರ ವಿರೋಧಿ ಮತಗಳನ್ನು ತಮ್ಮದನ್ನಾಗಿಸಿಕೊಳ್ಳಲು ಒಂದು ಕಡೆ ಆಂತರಂಗಿಕವಾಗಿ ಬಿಜೆಪಿಯವರು, ಇತ್ತ ರಾಜುನಾಯಕ ಅವರು ನಾರಾಯಣ ರೆಡ್ಡಿ ಅವರ ಬೆಂಬಲ ನಮಗೆ ಇದೆ ಎನ್ನುತ್ತಿದ್ದಾರೆ.  ನಾರಾಯಣ ರೆಡ್ಡಿ ಅವರು ಮಾತ್ರ ಯಾರಿಗೆ ತಮ್ಮ‌ಬೆಂಬಲ ಎಂಬುದನ್ನು ಈ ವರಗೆ ಬಹಿರಂಗ ಪಡಿಸಿಲ್ಲ.
ಇನ್ನೂ ಸುರೇಶ್ ಬಾಬು ಅವರನ್ನು ಸೋಲಿಸಲು ಮಾಜಿ ಸಚಿವ ಜನಾರ್ಧನರೆಡ್ಡಿ, ಗಣೇಶ್ ಅವರನ್ನು ಸೋಲಿಸಲಿ ನಾರಾಯಣ ರೆಡ್ಡಿ ಅವರು ಒಳ ಪೆಟ್ಟು ನೀಡಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕ್ಷೇತ್ರದ ಮತದಾರ ಯಾರ, ಯಾರ ಮಾತು ಕೇಳಿ, ಯಾರಿಂದ ಏನನ್ನು ನಿರೀಕ್ಷಿಸಿ, ಯಾರನ್ನು ಗೆಲ್ಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.