ಕಂಪ್ಲಿ: ಎಸ್.ಯು.ಸಿ.ಐ ನಿಂದ  ದೇವದಾಸ್  ನಾಮಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ  ಎ.ದೇವದಾಸ್,  ಪಕ್ಷದ  ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ನಡುಕಲ ಮಸೀದಿಯಿಂದ ಪೇಟೆ ಬಸವೇಶ್ವರ ದೇವಸ್ಥಾನದ ಮಾರ್ಗವಾಗಿ
ಮೆರವಣಿಗೆಯಲ್ಲಿ ತೆರಳಿ  ಕಂಪ್ಲಿಯ ಪುರಸಭೆ  ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡಿ  “ಶೋಷಣೆಯೇ ಜೀವಾಳವಾಗಿಸಿಕೊಂಡಿರುವ  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಿಜೆಪಿಯಿಂದ ಹಿಡಿದು ಕಾಂಗ್ರೆಸ್ , ಜೆಡಿಎಸ್ ಮತ್ತಿನ್ಯಾಯವುದೇ ಪಕ್ಷಗಳು ದುಡಿಯುವ ಜನಗಳ ಪರವಾದ ರಾಜಕೀಯ ಮಾಡಲು  ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಮನಿತರ, ಶೋಷಿತರ ಪರವಾಗಿ ಧ್ವನಿ ಎತ್ತುವ, ಜನಸಾಮಾನ್ಯರ ಬದುಕು  ಕಟ್ಟುವ, ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಕೊನೆ ಗಾಣಿಸುವಂತಹ ಕ್ರಾಂತಿಕಾರಿ ರಾಜಕೀಯದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ  ಜನಗಳ  ಹೋರಾಟಕ್ಕೆ  ಬದ್ಧರಾಗಿ ಚುನಾವಣೆಯ ಕಣದಲ್ಲಿದ್ದಾರೆ ಎ.ದೇವದಾಸ್ ಎಂದು ಹೇಳಿದರು.
 ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕೆ. ಸೋಮಶೇಖರ್, ಜಿಲ್ಲಾ ಸಮಿತಿ ಸದಸ್ಯರಾದ ಎಮ್.ಎನ್.ಮಂಜುಳ, ಡಾ.ಪ್ರಮೋದ್, ಡಿ.ನಾಗಲಕ್ಷ್ಮೀ, ಎ.ಶಾಂತ, ಗೋವಿಂದ್, ಹನುಮಪ್ಪ ಹಾಗೂ  ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.