ಕಂಪ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಹೆಸರಲ್ಲಿ ದಂಧೆ:ಆರೋಪ

ಕಂಪ್ಲಿ, ಮೇ.20: ಇಲ್ಲಿನ ಅಭಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ದಂಧೆ ನಡೆಯುತ್ತಿದ್ದು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಇಲ್ಲಿನ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರದಂದು ಸ್ಥಳೀಯ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಂಪ್ಲಿ ಪಟ್ಟಣದ ಬಳ್ಳಾರಿ ರಸ್ತೆ ಮಾರ್ಗದಲ್ಲಿರುವ ಅಭಯ ಎಂಬ ಖಾಸಗಿ ಆಸ್ಪತ್ರೆಯು ನಿರ್ಭಯವಾಗಿ ಕೋವಿಡ್-19 ಹೆಸರಿನಲ್ಲಿ ದಂಧೆ ಮಾಡಿ ಅಮಾಯಕ ರೋಗಿಗಳನ್ನು ಸುಲಿಗೆ ಮಾಡುತ್ತಿದೆ. ಇದರಿಂದ ಪಟ್ಟಣ ಹಾಗು ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸೋಂಕಿತರು ಚಿಕಿತ್ಸೆಗಾಗಿ ಈ ಅಭಯ ಆಸ್ಪತ್ರೆಗೆ ದಾಖಲಾಗಲು ಭಯಬೀಳುತ್ತಿದ್ದಾರೆ. ಜೊತೆಗೆ ಇಲ್ಲಿ ದಾಖಲಾಗುವ ರೋಗಿಗಳ ಪೈಕಿ ಬಹುತೇಕರು ಕೊರೋನಾವಲ್ಲದ ಅನ್ಯ ಕಾಯಿಲೆಗಳಿಂದ ಬಳಲುವವರಾಗಿದ್ದು ಅವರನ್ನು ಕೂಡ ಕೋವಿಡ್ ಟೆಸ್ಟ್‍ಗೆ ಒಳಪಡಿಸಿ ಕೊರೋನಾ ಸೋಂಕಿತರೆಂದು ದೃಢಪಡಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಗಂಭೀರ ಆರೋಪ ಕೇಳಿಬರುತ್ತಿದೆ. ಇನ್ನು ಕೊರೋನಾ ಪಾಸಿಟಿವ್ ಎಂದು ಈ ಅಭಯ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಂದ ಪ್ರತಿದಿನಕ್ಕೆ ಸಾವಿರಾರು ರೂಪಾಯಿಗಟ್ಟಲೆ ಬಿಲ್ ಮಾಡಿ ಒಂದು ವಾರಕ್ಕೆ ಸುಮಾರು ಲಕ್ಷಗಟ್ಟಲೆ ಬಿಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾದ ಪದಾಧಿಕಾರಿಗಳಾದ ಕಂಪ್ಲಿ ತಾಲೂಕು ಘಟಕ ಅಧ್ಯಕ್ಷ ಡಿ.ಮಂಜುನಾಥ, ಗೌರವಧ್ಯಕ್ಷ ಕೆ.ರಾಘವೇಂದ್ರ, ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಸಮಿತಿಯ ಅಧ್ಯಕ್ಷ ಡಿಎಚ್‍ಎಂ ರವೀಂದ್ರ, ಪ್ರಧಾನ ಕಾರ್ಯದರ್ಶಿ ಟಿಎಚ್‍ಎಂ ರಾಜಕುಮಾರ್ ಆರೋಪಿಸಿದರು.
ಬಳಿಕ ತಾಲೂಕಿನಲ್ಲಿ ಕೊರೋನಾ ಸೋಂಕಿತರು ಸೋಂಕು ತಗುಲಿದ್ದರು ಸಾರ್ವಜನಿಕವಾಗಿ ಹೊರಗಡೆ ತಿರುಗಾಡುತ್ತಿರುವ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಪ.ಜಾ/ಪ.ಪಂ ಬಾಲಕರ ಹಾಗು ಬಾಲಕಿಯರ ವಸತಿ ನಿಲಯ ಹಾಗು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಸದ್ಯ ಖಾಲಿಯಿದ್ದು ಅಲ್ಲಿ ಕೊರೋನಾ ಕೇರ್ ಸೆಂಟರ್ ತೆರೆಯಬೇಕು ಎಂದು ಆಗ್ರಹಿಸಿದರು. ಇನ್ನು ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ವಿಧಿಸಲಾಗಿರುವ ಸಂಪೂರ್ಣ ಲಾಕ್‍ಡೌನ್‍ಗೆ ಆದೇಶದನ್ವಯ ನ್ಯಾಯಬೆಲೆ ಅಂಗಡಿಯವರು ಸಾರ್ವಜನಿಕರ ಮನೆಮನೆಗಳಿಗೆ ಪಡಿತರವನ್ನು ತಲುಪಿಸುವ ಸೂಚನೆಯಿದ್ದು ಈ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆಯೂ ಆಗ್ರಹಿಸಲಾಯಿತು.