ಕಂಪ್ಲಿಯಲ್ಲಿ ಖಾಸಗಿ ಸಂಸ್ಥೆಯಿಂದ ಆರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ ಸ್ಥಗಿತ

ಕಂಪ್ಲಿ ಮೇ 27 : ಪಟ್ಟಣದ ಕುರುಗೋಡು ರಸ್ತೆಯ ಕಲ್ಗುಡಿ ಲೇ ಔಟ್ ನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಂಪ್ಲಿ ಯ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅವರ ಎಸ್ ಬಿ ಫೌಂಡೇಶನ್ ನಿಂದ ಕಾರ್ಯಾರಂಭ ಮಾಡಿದ್ದ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳೊಂದಿಗಿನ 50 ಹಾಸಿಗೆಯುಳ್ಳ‌ ಕರೋನಾ ಕೇರ್ ಸೆಂಟರ್ ತನ್ನ ಸೇವೆಯನ್ನ ಸ್ಥಗಿತಗೊಳಿಸಿ. ಕೇಂದ್ರಕ್ಕೆ ಬೀಗ ಹಾಕಿದೆ. ಇಲ್ಲಿದ್ದ ನಾಲ್ಕು ಜನ ರೋಗಿಗಳನ್ನು ಸರ್ಕಾರದ ಕೋವಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಇದಕ್ಕೆ ಚಾಲನೆ ನೀಡಿದ್ದರು. ಇದೇ ರೀತಿ ಕುರುಗೋಡಿನಲ್ಲಿ ಮತ್ತೊಂದು ಸೆಂಟರ್ ಆರಂಭಿಸುವುದಾಗಿ ಮಾಜಿ ಶಾಸಕ ಸುರೇಶ್ ಬಾಬು ಹೇಳಿದ್ದರು. ಆದರೆ ಅಲ್ಲಿ ಓಪನ್ ಮಾಡುವ ಮುನ್ನವೇ ಇಲ್ಲಿನದನ್ನು ಮುಚ್ಚಿರುವುದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಈಗ ರಾಜಕೀಯ ಬಣ್ಣವು ಬಳಿದುಕೊಂಡಿದೆ.

ಬಳ್ಳಾರಿಯಲ್ಲಿ ಟಚ್ ಫರ್ ಲೈಪ್ ಫೌಂಡೇಶನ್ ನ ನಾರಾ ಭರತ್ ರೆಡ್ಡಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಡಿಸಿ ಅವರು ಅನುಮತಿ‌ ನೀಡದೇ ಇರುವುದು ರಾಜಕೀಯಕ್ಜೆ ತಿರುಗಿ. ಭರತ್ ಅವರು ನಾನು ಕಾಂಗ್ರೆಸ್ ನವನೆಂದು ಡಿಸಿ ಹೀಗೆ ಮಾಡಿದ್ದಾರೆ. ಬಿಜೆಪಿಯವರಾದ ಸುರೇಶ್ ಬಾಬು ಅವರಿಗೆ ಸರ್ಕಾರಿ ಕಟ್ಟಡದಲ್ಲಿ ಮಾಡಲು ಹೇಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದ್ದರು.
ಇದರ ಬೆನ್ನ ಹಿಂದೆ ಈ ಬೆಳವಣಿಗೆ ನಡೆದಿದೆ.

ಸುರೇಸ್ ಬಾಬು ಅವರು ಆರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ ಬಂದ್ ಆಗಿರುವ ಬಗ್ಗೆ ಬಗ್ಗೆ ತಹಸೀಲ್ದಾರ್ ಗೌಸಿಯಾಬೇಗಂ ಅವರು ಮಾತನಾಡಿ, ಸರ್ಕಾರದ ವ್ಯಾಪ್ತಿಗೊಳಪಡುವ ಜಿಲ್ಲೆಯ ಎಲ್ಲಾ ಸರ್ಕಾರಿ ವಸತಿ ನಿಲಯಗಳಲ್ಲಿ ಸರ್ಕಾರದ ವತಿಯಿಂದಲೇ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಆ ಆದೇಶದನ್ವಯ ಕಂಪ್ಲಿ ಪಟ್ಟಣದ ಕಲ್ಗುಡಿ ಲೇ ಔಟ್ ಪ್ರದೇಶದಲ್ಲಿರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಇತ್ತೀಚೆಗೆ ಕಾರ್ಯಾರಂಭ ಮಾಡಿದ್ದ ಎಸ್ ಬಿ ಫೌಂಡೇಶನ್ ನ ಕೋವಿಡ್ ಕೇರ್ ಸೆಂಟರ್ ನ್ನು ಖಾಸಗಿ ಕಟ್ಟಡಕ್ಕೆ ವರ್ಗಾಯಿಸುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅಲ್ಲಿನ ಕೊರೋನಾ ಆರೈಕೆ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಫೌಂಡೇಷನ್ ನವರು ಖಾಸಗಿ ಕಟ್ಟಡ ನಿಗದಿಪಡಿಸಿಕೊಂಡು ಅದರ ಮಾಹಿತಿ ನಮಗೆ ನೀಡಿದಲ್ಲಿ ಕಟ್ಟಡವನ್ನು ಹಾಗು ಅದರೊಳಗೆ ಕೊರೋನಾ ಸೋಂಕಿತರಿಗಾಗಿ ಮಾಡುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಅನುಮೋದನೆಗಾಗಿ ಕೋರಿದರೆ. ಆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು. ಸದ್ಯ ಸರ್ಕಾರದಿಂದ ಕಾಕತೀಯ ನಗರದ ಬಾಲಕಿಯರ ಸರ್ಕಾರಿ ವಸತಿ ನಿಲಯದಲ್ಲಿ ಸೇವೆ ನೀಡುತ್ತಿರುವ ಒಟ್ಟು 90 ಹಾಸಿಗೆಗಳ ಕೊರೋನಾ ಆರೈಕೆ ಕೇಂದ್ರದಲ್ಲಿ ಪ್ರಸ್ತುತ 62 ಮಂದಿ ಸೋಂಕಿತರು ಇದ್ದು ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ.

ಎಸ್ ಬಿ ಫೌಂಡೇಷನ್ ನ ಸಿಸಿಸಿ ಕಾರ್ಯ ಸ್ಥಗಿತಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಫೌಂಡೇಷನ್ ನ ಮುಖಂಡ ಪಿ.ಬ್ರಹ್ಮಯ್ಯ ಸಂಜೆವಾಣಿಯೊಂದಿಗೆ ಮಾತನಾಡಿ ಪಟ್ಟಣದಲ್ಲಿ ಸರ್ಕಾರದಿಂದ ಬಾಲಕಿಯರ ಸರ್ಕಾರಿ ವಸತಿ ನಿಲಯದಲ್ಲಿ ಕೊರೋನಾ ಆರೈಕೆ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಡ್ ಗಳು ಭರ್ತಿಯಾದಲ್ಲಿ, ತದನಂತರದಲ್ಲಿ ಬರುವ ರೋಗಿಗಳನ್ನು ಎಸ್. ಬಿ. ಫೌಂಡೇಷನ್ ನಿಂದ ಬಾಲಕರ ಸರ್ಕಾರಿ ವಸತಿ ನಿಲಯದಲ್ಲಿ ನಿರ್ಮಾಣಗೊಂಡ ಸಿಸಿಸಿಯಲ್ಲಿ ದಾಖಲಿಸಿಕೊಂಡು ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲಿದ್ದೇವೆ. ಇಲ್ಲಿ ಸಿಸಿಸಿ ಕಾರ್ಯಾರಂಭ ಮಾಡಿದಾಗಿನಿಂದ ದಾಖಲಾಗಿದ್ದ 8 ಜನ ಸೋಂಕಿತರನ್ನು ಸರ್ಕಾರದ ಸಿಸಿಸಿಗೆ ರವಾನಿಸಲಾಗಿದೆ. ಕಲ್ಗುಡಿ ಲೇ ಔಟ್ ಪ್ರದೇಶದ ಬಾಲಕರ ಸರ್ಕಾರಿ ವಸತಿ ನಿಲಯದಲ್ಲಿ ಎಸ್ ಬಿ ಫೌಂಡೇಷನ್ ನಿಂದ ಆರಂಭಿಸಲಾಗಿರುವ ಕೊರೋನಾ ಕೇರ್ ಸೆಂಟರ್ ತನ್ನ ಕಾರ್ಯ ಸ್ಥಗಿತಗೊಳಿಸಿಲ್ಲ ಎಂದು ರಾಜಕೀಯದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇನ್ನು ಫೌಂಡೇಷನ್ ನ ಸಿಸಿಸಿಯನ್ನು ಯಾವುದೇ ಖಾಸಗಿ ಕಟ್ಟಡಕ್ಕೆ ವರ್ಗಾಯಿಸುವ ಸೂಚನೆ ನಮಗೆ ಬಂದಿಲ್ಲ. ಬದಲಿಗೆ ಕಲ್ಗುಡಿ ಲೇ ಔಟ್ ನ ಬಾಲಕರ ಸರ್ಕಾರಿ ವಸತಿ ನಿಲಯ ಕಟ್ಟಡದಲ್ಲೆ ಫೌಂಡೇಷನ್ ನ ಸಿಸಿಸಿಯು ತನ್ನ ಸೇವೆ ಮುಂದವರೆಸಲಿದೆ ಎನ್ನುತ್ತಾರಡ.

ವಾಸ್ತವ ಸ್ಥಿತಿ:
ಎಸ್ ಬಿ ಫೌಂಡೇಷನ್ ನಿಂದ ನಿರ್ಮಾಣಗೊಂಡಿದ್ದ ಕೊರೋನಾ ಕೇರ್ ಸೆಂಟರ್ ಗೆ ಗುರುವಾರ ಭೇಟಿ ನೀಡಿದಾಗ ಸಿಸಿಸಿಯ ಕಟ್ಟಡದ ಬಾಗಿಲುಗಳಿಗೆ ಬೀಗ ಜಡಿಯಲಾಗಿತ್ತು. ಇನ್ನು ಕೇಂದ್ರದ ಹೊರಗಡೆ ನಿಲುಗಡೆ ಮಾಡಲಾಗುತ್ತಿದ್ದ ಆಂಬ್ಯುಲೆನ್ಸ್ ಹಾಗು ಆರೋಗ್ಯ ಸಿಬ್ಬಂದಿಗಳು ಇರದಿರುವುದು ಕಂಡು ಬಂತು. ಜೊತೆಗೆ ಕೇಂದ್ರದ ಹೊರಗಡೆ ಹಾಕಲಾಗಿದ್ದ ಎಸ್ ಬಿ ಫೌಂಡೇಷನ್ ಕೊರೋನಾ ಕೇರ್ ಸೆಂಟರ್ ಎನ್ನುವ ನಾಮಫಲಕವೂ ಕೂಡ ಕಾಣಸಿಗಲಿಲ್ಲ. ಹೀಗಾಗಿ, ಈ ಎಲ್ಲಾ ಅಂಶಗಳು ಸರ್ಕಾರಿ ವಸತಿ ನಿಲಯದಲ್ಲಿ ಆರಂಭವಾಗಿದ್ದ ಎಸ್ ಬಿ ಫೌಂಡೇಷನ್ ಸಿಸಿಸಿಯು ತನ್ನ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿದೆ ಎನ್ನುವ ಅಂಶವನ್ನು ಸ್ಪಷ್ಟಪಡಿಸಿದಂತಿದೆ.

ಇನ್ನು ಗುರುವಾರ ಬೆಳಗ್ಗೆ ಹೊಸಪೇಟೆಯ ಎಸಿ ಸಿದ್ದರಾಮೇಶ್ವರ ಅವರು ಕಂಪ್ಲಿ ಹಾಗು ಎಮ್ಮಿಗನೂರಿನ ಸಿಸಿಸಿ ಪರಿಶೀಲನಾ ಭೇಟಿಗಾಗಿ ಧಾವಿಸಿದಾಗ ಸರ್ಕಾರಿ ವಸತಿ ನಿಲಯ ಕಟ್ಟಡದಲ್ಲಿ ತೆರೆಯಲಾಗಿದ್ದ ಎಸ್ ಬಿ ಫೌಂಡೇಷನ್ ನ ಕೊರೋನಾ ಕೇರ್ ಸೆಂಟರ್ ಕಾರ್ಯ ಸ್ಥಗಿತದ ಬಗ್ಗೆಯೂ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಕಾಲ ಚರ್ಚಿಸಲಾಗಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ, ಜಿಲ್ಲಾಧಿಕಾರಿಗಳ ನೂತನ ಆದೇಶದನ್ವಯ ಎಸ್ ಬಿ ಫೌಂಡೇಷನ್ ನಿಂದ ಆರಂಭಗೊಂಡಿದ್ದ ಕೊರೋನಾ ಆರೈಕೆ ಕೇಂದ್ರ ತಾತ್ಕಾಲಿಕವಾಗಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಆದರೆ, ಫೌಂಡೇಷನ್ ನ ಮುಖಂಡರು ಮಾತ್ರ ಕಾರ್ಯಸ್ಥಗಿತಗೊಳಿಸಿಲ್ಲ. ಬದಲಿಗೆ ಸರ್ಕಾರದಿಂದ ನಿರ್ಮಾಣಗೊಂಡ ಸಿಸಿಸಿಯಲ್ಲಿ ಬೆಡ್ ಗಳು ಭರ್ತಿಯಾದ ಬಳಿಕ ಸಿಸಿಸಿ ಸೇವೆ ನೀಡಲಿದೆ ಎನ್ನುತ್ತಿದ್ದಾರೆ‌.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸರ್ಕಾರಿ ವಸತಿ ನಿಲಯ ಕಟ್ಟಡದಲ್ಲಿ ಖಾಸಗಿ ಒಡೆತನದ ಫೌಂಡೇಷನ್ ಸಿಸಿಸಿ ಆರಂಭಿಸಿ ಸ್ಥಗಿತಗೊಳಿಸಿದ್ದರ ಹಿಂದೆ ರಾಜಕೀಯದ ಕಾರಣಗಳೂ ಇವೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಆದರೆ, ಸರ್ಕಾರಿ ವಸತಿ ನಿಲಯದಲ್ಲಿ ಚಾಲ್ತಿಗೊಂಡು ಸದ್ಯ ಸ್ಥಗಿತಗೊಂಡಿರುವ ಸಿಸಿಸಿಯು ಪುನಃ ಅದೇ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆಯಾ….ಅಥವಾ ಖಾಸಗಿ ಕಟ್ಟಡಕ್ಕೆ ವರ್ಗಾವಣೆಗೊಳ್ಳಲಿದೆಯಾ..ಎಂಬುದನ್ನ ಕಾದುನೋಡಬೇಕಿದೆ.