ಕಂಪ್ಲಿಯಲ್ಲಿ ಮುಖ್ಯರಸ್ತೆಗಳೆಲ್ಲವು ಫುಲ್ ರಶ್; ಅಲ್ಲಲ್ಲಿ ಟ್ರಾಫಿಕ್ ಜಾಮ್


ಕಂಪ್ಲಿ, ಮೇ.31: ಅಗತ್ಯ ವಸ್ತುಗಳ ಖರೀದಿಗಾಗಿ ಅನುವು ಮಾಡಿಕೊಟ್ಟ ಹಿನ್ನೆಲೆ ಸೋಮವಾರದಂದು ಏಕಾಏಕಿ ಸಾರ್ವಜನಿಕರು ರಸ್ತೆಗಿಳಿದ ಹಿನ್ನೆಲೆ ಪಟ್ಟಣದ ಪ್ರಮುಖ ರಸ್ತೆಗಳೆಲ್ಲವೂ ಬೆಳಗ್ಗೆ ಸಂಪೂರ್ಣ ವಾಹನಗಳಿಂದ ಗಿಜಿಗುಡುತ್ತಿದ್ದವಲ್ಲದೇ, ಅಲ್ಲಲ್ಲಿ ಟ್ರಾಫಿಕ್ ಜಾಮ್ ಆದ ಚಿತ್ರಣ ಸೃಷ್ಟಿಯಾಗಿತ್ತು.
ಕಳೆದ ಐದು ದಿನಗಳಿಂದ ಸಂಪೂರ್ಣ ಸ್ತಬ್ಧವಾಗಿದ್ದ ಪಟ್ಟಣ ಸೋಮವಾರ ಬೆಳಗ್ಗೆ ಜನಸಂದಣಿಯಿಂದ ಕೂಡಿತ್ತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಗತ್ಯ ವಸ್ತುಗಳ ಖರೀದಿಗಾಗಿ ಕಿರಾಣಿ ಅಂಗಡಿ, ತರಕಾರಿ-ಹಣ್ಣಿನ ಬಂಡಿಗಳ ಬಳಿ ಜಮಾಯಿಸಿದ್ದರು. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ವಿವಿಧ ರಸ್ತೆ ಮಾರ್ಗಗಳಲ್ಲಿ ಬಿದಿರನ ಬೊಂಬುಗಳು ಹಾಗು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದ ಕಾರಣ ರಸ್ತೆಗಳಲ್ಲಿ ಎತ್ತ ನೋಡಿದರತ್ತ ವಾಹನಗಳು ಕಿಕ್ಕಿರಿದು ಸಂಚರಿಸುತ್ತಿದ್ದವು. ಇದರ ಜೊತೆಗೆ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲಾದ ದ್ವಿ ಚಕ್ರ ವಾಹನಗಳಿಂದ ಜನರ ಓಡಾಟಕ್ಕೆ ತೊಂದರೆಯಾಗಿತ್ತು. ಇನ್ನು ಅನ್ಯ ಊರುಗಳಿಂದ ಪಟ್ಟಣಕ್ಕೆ ವಿವಿಧ ಸಾಮಾಗ್ರಿಗಳನ್ನು ಹೊತ್ತು ಬಂದ ಅನೇಕ ಲಾರಿ, ಆಟೋ, ಟ್ಯಾಕ್ಸಿಗಳ ಓಡಾಟವೂ ಹೆಚ್ಚಾಗಿದ್ದರಿಂದ ಇಲ್ಲಿನ ಮಾರೆಮ್ಮ ದೇವಸ್ಥಾನ ರಸ್ತೆ, ಅಂಬೇಡ್ಕರ್ ವೃತ್ತ ರಸ್ತೆ, ಕುರುಗೋಡು ರಸ್ತೆಗಳಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮೆ.31 ಹಾಗು ಜೂ.1 ಎರಡು ದಿನಗಳ ಕಾಲ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. 6 ತಾಸುಗಳ ಅವಕಾಶ ನೀಡಿದ್ದರೂ ಜನರು ಮಾತ್ರ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡದಿರುವುದು ಕಂಡುಬಂತು. ಅಗತ್ಯ ವಸ್ತುಗಳೆಲ್ಲ ಅದೆಲ್ಲಿ ಮಾಯವಾಗಿಬಿಡುತ್ತವೋ ಎನ್ನುವ ರೀತಿಯಲ್ಲಿ ಸಾರ್ವಜನಿಕರು ಮುಗಿಬಿದ್ದು ಖರೀದಿ ಮುಂದಾಗಿದ್ದು ಮಾತ್ರ ವಿಪರ್ಯಾಸಕರ. ಇದೊಂದು ಕಡೆಯಾದರೆ ಮತ್ತೊಂದು ಕಡೆ ಕೆಲ ಪುಣ್ಯಾತ್ಮರು ತಾವು ಸಂಚರಿಸುತ್ತಿರುವುದು ಜನಸಂದಣಿಯಿರುವ ರಸ್ತೆಗಳಲ್ಲಿ ಅನ್ನೋದನ್ನು ಮರೆತು ಕನಿಷ್ಠ ಪಕ್ಷ ಮಾಸ್ಕ್ ಧಾರಣೆಯನ್ನೂ ಮಾಡದೇ ರಾಜರೋಷವಾಗಿ ತಿರುಗಾಡುತ್ತಾ ಸಾಮಾನ್ಯ ಪ್ರಜ್ಞೆಯನ್ನೂ ಮರೆತಂತಿದ್ದರು. ಇವೆಲ್ಲದರ ಮಧ್ಯೆ ಪುರಸಭೆಯ ಅಧಿಕಾರಿಗಳು ಕಿರಾಣಿ ಅಂಗಡಿ, ತರಕಾರಿ ಬಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಸೂಚಿಸಿದರು. ಅಂಗಡಿ ಮಾಲೀಕರಿಗೆ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್‍ಗಳನ್ನು ರಚಿಸಿ ನಿಲ್ಲಿಸುವ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು.
ಒಟ್ಟಾರೆಯಾಗಿ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಲಾಕ್‍ಡೌನ್‍ಗೆ ಆದೇಶಿಸಿದೆ ಎನ್ನುವ ಸಂಗತಿಯನ್ನೇ ಸಾರ್ವಜನಿಕರು ಮರೆತಂತಿದ್ದಾರೆ. ಕನಿಷ್ಠ ಜಾಗೃತಿ ಹಾಗು ಸಮಯ ಪ್ರಜ್ಞೆಯನ್ನು ಇಟ್ಟುಕೊಳ್ಳದೇ ಹಾಗು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ನಿಯಮ ಅನುಸರಿಸದೇ ಅಡ್ಡಾದಿಡ್ಡಿ ಓಡಾಡುವ ಜನರಿಗೆ ಅದ್ಯಾವಾಗ ಬುದ್ಧಿ ಬರುತ್ತದೋ., ಆ ದೇವರೇ ಬಲ್ಲ..