ಕಂಪ್ಲಿಯಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಚಾಲನೆ

ಕಂಪ್ಲಿ, ಏ.27: ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರದಂದು ತಹಸೀಲ್ದಾರ್ ಗೌಸಿಯಾಬೇಗಂ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ತಹಸೀಲ್ದಾರ್ ಗೌಸಿಯಾಬೇಗಂ, ಭತ್ತ ಖರೀದಿ ಕೇಂದ್ರದ ಸಾಫ್ಟ್‍ವೇರ್ ಸಿದ್ದಪಡಿಸಲು ಸ್ವಲ್ಪ ವಿಳಂಬವಾದ ಹಿನ್ನೆಲೆ ಕೊಂಚ ತಡವಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಏಪ್ರಿಲ್ ತಿಂಗಳಾಂತ್ಯದವರೆಗೂ ರೈತರಿಂದ ಜೋಳ ಖರೀದಿಸಲಾಗುವುದು. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಭತ್ತ ಖರೀದಿಸಲಾಗುವುದು. ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‍ಗೆ 1868ರೂ.ಗಳಷ್ಟು, ಗ್ರೇಡ್ ಎ ಭತ್ತಕ್ಕೆ 1888ರೂಗಳಷ್ಟು ಬೆಂಬಲ ಬೆಲೆಯನ್ನು ಸರಕಾರ ನಿಗದಿಪಡಿಸಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಪಟ್ಟಣದಲ್ಲಿ ಖಾಯಂ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ಭತ್ತದ ಬೆಲೆಯಲ್ಲಿ ನಿಶ್ಚಿತತೆ ಕಾಪಾಡಲು ಸಾಧ್ಯವಿದೆ ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್, ಖರೀದಿ ಕೇಂದ್ರದ ಆಧಿಕಾರಿ ಎಂ.ಸೆಲ್ವರಾಜ್, ರೈತರಾದ ಕೊಟ್ಟೂರು ರಮೇಶ್, ಆನಂದರೆಡ್ಡಿ, ಮುರಾರಿ, ತಿಮ್ಮಪ್ಪ ನಾಯಕ, ಕುರಿ ಹುಸೇನಪ್ಪ, ಪಿ.ಯುಗಂಧರನಾಯ್ಡು, ಕೆ.ದೊಡ್ಡಬಸಪ್ಪ, ಗಣೇಶ್ ತಾತ, ವಿರುಪಾಕ್ಷಪ್ಪ, ಜಗದೀಶ್ ಸೇರಿದಂತೆ ರೈತರನೇಕರಿದ್ದರು.