ಕಂಪ್ಲಿಯಲ್ಲಿ ‘ತುಂತುರು’ ಮಳೆಯ ಕಾಟ : ‘ಸಾಂಕ್ರಾಮಿಕ’ ಭೀತಿಯಲ್ಲಿ ಜನತೆ

ಕಂಪ್ಲಿ ಜ 06 : ಬಂಗಾಳಕೊಲ್ಲಿಯಲ್ಲಿ ಏರ್ಪಟ್ಟ ಮೇಲ್ಮೈ ಸುಳಿಗಾಳಿ ಪರಿಣಾಮ ತಾಲೂಕಿನಾದ್ಯಂತ ಬುಧವಾರ ಬೆಳಗಿನ ಜಾವದಿಂದಲೇ ಕೊರೆವ ಚಳಿ ಮಧ್ಯೆಯೇ ತುಂತುರು ಮಳೆಯ ಹಾವಳಿ ಸೃಷ್ಟಿಯಾಗಿದ್ದು ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗುವಂತೆ ಮಾಡಿದೆ.
ಚಳಿಗಾಲದ ಕೊರೆವ ಚಳಿಗೆ ಈಗಾಗಲೇ ತಾಲೂಕಿನ ಜನತೆ ಕಂಗೆಟ್ಟಿದ್ದು, ನೆಗಡಿ,ಜ್ವರದಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಮಧ್ಯೆಯೇ ಬುಧವಾರ ಬೆಳ್ಳಂಬೆಳಗ್ಗೆಯೇ ವರುಣನ ಅಕಾಲಿಕ ಕಾಟಕ್ಕೆ ಜನರು ತತ್ತರಿಸುವಂತಾಗಿದೆ.
ಬುಧವಾರ ಬೆಳಗ್ಗೆ 8 ಗಂಟೆಯಾದರೂ ಎಲ್ಲೆಡೆ ಮಂಜು, ಮೋಡ ಕವಿದ ವಾತಾವರಣ ಮಧ್ಯೆ ತುಂತುರು ಮಳೆ ಆರಂಭಗೊಂಡಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಗಿಜಿಗುಡುತ್ತಿದ್ದ ಪಟ್ಟಣದ ದೈನಂದಿನ ಮಾರುಕಟ್ಟೆ, ಮುಖ್ಯರಸ್ತೆಗಳು, ಬಸ್‍ನಿಲ್ದಾಣ, ಆಟೋ ನಿಲ್ದಾಣ ಅಕ್ಷರಶಃ ಜನರಿಲ್ಲದೇ ಬಿಕೋ ಎನ್ನುವ ಚಿತ್ರಣ ಸೃಷ್ಟಿಯಾಗಿತ್ತು. ಚಿಕ್ಕ ಮಕ್ಕಳು, ವಯೋವೃದ್ಧರು ಮನೆಯಿಂದ ಹೊರಬಾರದಂತಹ ಸ್ಥಿತಿ ಎದುರಾಗಿತ್ತು. ಇನ್ನು ಶಾಲೆಗೆ ತೆರಳುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಕೊಡೆ, ಮಳೆ ಹೊದಿಕೆಗಳ ಸಹಾಯದಿಂದ ತರಗತಿಗಳಿಗೆ ತೆರಳಿದರು. ಇನ್ನು ದೈನಂದಿನ ಕೂಲಿಕಾರರು ಕೂಡ ಮಳೆಯಲ್ಲಿ ನೆನೆದುಕೊಂಡೇ ತಮ್ಮ ತಮ್ಮ ಕೆಲಸಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಪಟ್ಟಣದ ಅಂಬೇಡ್ಕರ್ ವೃತ್ತ, ಮಾರೆಮ್ಮ ದೇವಸ್ಥಾನ ರಸ್ತೆ, ಪೇಟೆ ಬಸವೇಶ್ವರ ರಸ್ತೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳೆಲ್ಲವೂ ಖಾಲಿ ಖಾಲಿ ಹೊಡೆಯುತ್ತಿದ್ದವು. ಇನ್ನು ಬೆಳಗ್ಗೆ 8 ಗಂಟೆಯಷ್ಟೊತ್ತಿಗೆ ತೆರೆಯಲಾಗುತ್ತಿದ್ದ ಅಂಗಡಿಗಳೆಲ್ಲವು ಮುಚ್ಚಿದ್ದವು.
ಒಟ್ಟಾರೆಯಾಗಿ, ಚಳಿಗಾಲದ ಚಳಿಯಿಂದಲೇ ಹೈರಾಣಾಗಿದ್ದ ಜನತೆಗೆ ಅಕಾಲಿಕ ತುಂತುರು ಮಳೆ ತೀವ್ರ ಸಂಕಟ ತಂದೊಡ್ಡಿದೆ. ಜಿಲ್ಲಾ ಕೃಷಿ ಹವಾಮಾನ ಹಾಗು ಕೃಷಿ ವಿಜ್ಞಾನ ಕೇಂದ್ರದ ಪ್ರಕಾರ, ಜ.6 ಮತ್ತು ಜ.7 ಎರಡು ದಿನಗಳ ಕಾಲ ತಾಲೂಕಿನಾದ್ಯಂತ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಮಳೆ ಮುನ್ಸೂಚನೆಗುನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸದ್ಯ ತಾಲೂಕಿನಾದ್ಯಂತ ಭತ್ತದ ಸಸಿ ನಾಟಿ, ಮೆಣಸಿನಕಾಯಿ ಸಸಿ ನಾಟಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ನಾಟಿ ಕಾರ್ಯ ಜೋರಾಗಿದೆ. ಇನ್ನು ಸೂಕ್ತ ಮಾರುಕಟ್ಟೆ ಬೆಲೆಗೆ ಕಾದುಕೂತ ಕೆಲ ರೈತರು ಕಟಾವು ಮಾಡಲಾದ ಭತ್ತ ಹಾಗು ಮೆಣಸಿನಕಾಯಿ ಪೈರನ್ನು ಒಣಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಹೊತ್ತಲ್ಲೆ ತುಂತುರು ಮಳೆಯ ಹಾವಳಿ ಎದುರಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಉಂಟಾಗಿ ಹೊಸ ಸಂಕಷ್ಟ ತಂದೊಡ್ಡಲಿದ್ಯಾ..? ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿರುವುದಂತು ಸತ್ಯ.