
ಕಂಪ್ಲಿ. ಮಾ,26- ತಾಲೂಕಿನಲ್ಲಿ ಸಂಪೂರ್ಣವಾಗಿ ಕಳ್ಳಭಟ್ಟಿಯನ್ನು ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಸಭೆಯ ಮೂಲಕ ಕಳ್ಳಭಟ್ಟಿಗೆ ಕಡಿವಾಣ ಹಾಕಲು ಸೂಕ್ತಕ್ರಮವಹಿಸಲಾಗುತ್ತಿದೆ ಎಂದು ಹೊಸಪೇಟೆ ಅಬಕಾರಿ ಉಪ ವಿಭಾಗದ ಉಪ ಅಧೀಕ್ಷಕ ಬಸವರಾಜ ಹಡಪದ ತಿಳಿಸಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಜರುಗಿದ ತಾಲೂಕು ಮಟ್ಟದ ಕಳ್ಳಭಟ್ಟಿ ನಿರ್ಮೂಲನಾ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಂಪ್ಲಿ ಶಿಕಾರಿಹಟ್ಟಿ ಕಾಲೋನಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯ ತಯಾರಿಕೆ, ಸಾಗಾಟ, ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರ ಅವಶ್ಯವಿದೆ. ಹೊಸಪೇಟೆ ವಲಯ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳು ಹಾಗೂ ಕಂಪ್ಲಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳು ಕಂಪ್ಲಿ ಶಿಕಾರಿಹಟ್ಟಿ ಕಾಲೋನಿಯ ಮೇಲೆ ಅಬಕಾರಿ ದಾಳಿ ಮಾಡಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮಕೈಗೊಂಡು ಸಂಪೂರ್ಣವಾಗಿ ಕಳ್ಳಭಟ್ಟಿ ನಿರ್ಮೂಲನೆಯಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಎಂದು ಸಲಹೆ ಸೂಚನೆ ನೀಡಿದರು.
ಈ ಸಭೆಯಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ, ತಾಪಂ ಇಒ ಬಾಲಕೃಷ್ಣ, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೇದಾರ ಜಿ.ಪಂಪಾಪತಿ, ಕಂಪ್ಲಿ ಪೊಲೀಸ್ ಠಾಣೆಯ ಎಎಸ್ಐ ಸಿ.ಪರಶುರಾಮ, ಅಬಕಾರಿ ಇಲಾಖೆಯ ನಿರೀಕ್ಷಕರಾದ ಹೊನ್ನೂರವಲಿ, ಅಂಬಣ್ಣ ಎ.ಜಿ, ಉಪ ನಿರೀಕ್ಷಕರಾದ ಎಸ್.ಎನ್.ಫೇರ್ಪಡೆ, ಪ್ರಕಾಶ್, ಕನಕಾಚಲ, ಪ್ರಥಮ ದರ್ಜೆ ಸಹಾಯಕ ಕೆ.ಮೌನೇಶ್, ಪುರಸಭೆ ಸಿಬ್ಬಂದಿ ರಾಧಿಕಾರಿ, ಮುಖಂಡ ಹೆಚ್.ಪಿ.ಶಿಕಾರಿರಾಮು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.