ಕಂಪ್ಲಿಯಲ್ಲಿ ಕೋವಿಡ್ ಟೆಸ್ಟ್‍ಗಾಗಿ ಮೊಬೈಲ್ ಟೀಂ ರಚನೆ

ಕಂಪ್ಲಿ ಏ 27 : ಪಟ್ಟಣದ ವಿನಾಯಕ ನಗರ ಬಡಾವಣೆಯಲ್ಲಿ ಈಚೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನಲೆ ಮುಜಾಗ್ರತಾ ಕ್ರಮವಾಗಿ ಬಡಾವಣೆ ಜನರ ಆರೋಗ್ಯ ಹಿತದೃಷ್ಟಿಯಿಂದ ಕೊರೋನಾ ಪರೀಕ್ಷೆಗಾಗಿ ಮೊಬೈಲ್ ಟೀಂ (ಸಂಚಾರಿ ತಂಡ) ನ್ನು ರಚಿಸಲಾಗಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ಮಾಹಿತಿ ನೀಡಿದರು.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಹಿನ್ನಲೆಯಲ್ಲಿ, ವಿನಾಯಕ ನಗರದಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಬಳಿಕ ಸತ್ಯನಾರಾಯಣ ಪೇಟೆ, ಕಂಪ್ಲಿ ಕೊಟ್ಟಾಲ್‍ನಲ್ಲಿಯೂ ಸಂಚಾರಿ ತಂಡ ಕಾರ್ಯಪ್ರವೃತ್ತವಾಗಲಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಪ್ರಭಾಕರ ಮಾತನಾಡಿ, ವಿನಾಯಕ ನಗರದಲ್ಲಿ ಬರುವ ಗೋಂಧಳಿ ನಗರದಲ್ಲಿ 70ಮನೆಗಳಿದ್ದು, 450 ಜನಸಂಖ್ಯೆಯಿದೆ. ಮೊದಲ ಹಂತದಲ್ಲಿ ಇಂದು 100 ಜನರ ಆರ್‍ಎಟಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಅವರ ಪೈಕಿ 8 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಉಮಾದೇವಿ, ಲಕ್ಷ್ಮಿ, ಲ್ಯಾಬ್ ಟೆಕ್ನಿಷಿಯನ್ ಮಾನಸ, ಡಿಇಒ ಚೇನತ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.