ಕಂಪ್ಲಿಯಲ್ಲಿ ಕೊರೋನಾ ಪ್ರಾಥಮಿಕ ಆರೈಕೆ ಕೇಂದ್ರ ಆರಂಭ

ಕಂಪ್ಲಿ ಮೇ 21 : ಪಟ್ಟಣದ ಕಾಕತೀಯ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಗುರುವಾರದಂದು ಆರಂಭಗೊಂಡ ಕೊರೋನಾ ಆರೈಕೆ ಕೇಂದ್ರಕ್ಕೆ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಶಾಸಕ ಜೆ.ಎನ್.ಗಣೇಶ್, ಪಟ್ಟಣದ ಸೋಂಕಿತರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಇಲ್ಲಿನ ಕಾಕತೀಯ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕೊರೊನಾ ಪ್ರಾಥಮಿಕ ಆರೈಕೆ ಕೇಂದ್ರವನ್ನು ಮೇ.20ರಿಂದಲೇ ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಸಹಕಾರದಿಂದ ಹೋಮ್ ಐಸೋಲೇಷನ್‍ನಲ್ಲಿರುವ ಸೋಂಕಿತರಿಗಾಗಿ 85ಹಾಸಿಗೆಗಳ ಆರೈಕೆ ಕೇಂದ್ರ ಸ್ಥಾಪಿಸಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿಯಾಗಿ ಇನ್ನು 50 ಹಾಸಿಗೆಗಳ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೋಂಕಿತರ ತುರ್ತು ಚಿಕಿತ್ಸೆಗಾಗಿ 20 ಆಕ್ಸಿಜನ್ ಕಾನ್ಸಟ್ರೆಂಟರ್ಸ್ ಬಾಕ್ಸ್‍ಗಳನ್ನು ಕೇಂದ್ರದಲ್ಲಿ ಮುನ್ನೆಚ್ಛರಿಕೆ ಕ್ರಮವಾಗಿ ಅಳವಡಿಸಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ, ಎರಡು ದಿನದಲ್ಲ್ಲಿ ಹೊಸ ಅಂಬ್ಯುಲೆನ್ಸ್ ಬರಲಿದೆ. ಜಿಲ್ಲಾಡಳಿತದಿಂದ ಸೋಂಕಿತರಿಗೆ ಊಟ, ಉಪಹಾರ ವ್ಯವಸ್ಥೆ ಮಾಡುತ್ತದೆ. ಸೋಂಕಿತರು ಮನೆಗಳಲ್ಲಿರುವ ಬದಲು ಕೇಂದ್ರಕ್ಕೆ ಬರಲು ಮನವಿ ಮಾಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಧಿಕಾ ಮಾತನಾಡಿ, ಡಿ’ಗ್ರೂಪ್ ನೌಕರರ ಕೊರತೆ, ಕೆಲ ಸಣ್ಣ, ಪುಟ್ಟ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಕೂಡಲೇ ಶಾಸಕರು ಇಲಾಖೆ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಸಂಪರ್ಕಿಸಿ, ಎಲ್ಲ ಸೌಲಭ್ಯ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ತಹಸೀಲ್ದಾರ್ ಗೌಸಿಯಾಬೇಗಂ, ಉಪ ತಹಸೀಲ್ದಾರ ಬಿ.ರವೀಂದ್ರಕುಮಾರ್, ತಾ.ಪಂ.ಇಒ ಬಿ.ಬಾಲಕೃಷ್ಣ, ವೈದ್ಯಾಧಿಕಾರಿ ಡಾ.ರೇವಣಸಿದ್ದೇಶ್ವರ, ಆರ್‍ಐ ಎ.ಗಣೇಶ್, ಔಷಧ ವಿತರಕ ಶಿವರುದ್ರಪ್ಪ, ಆರೋಗ್ಯ ನಿರೀಕ್ಷಕ ಬಸವರಾಜ್, ಗ್ರಾಮಲೆಕ್ಕಿಗರಾದ ಗಿರೀಶ್, ವಿಜಯಕುಮಾರ್, ಎಂಎಲ್‍ಎಚ್‍ಪಿ ಲಕ್ಷ್ಮಿ ಕಲ್ಯಾಣಿ ಇತರಿದ್ದರು.