ಕಂಪ್ಲಿಯಲ್ಲಿ ಕೊರೋನಾರೋಗ್ಯ ಸುರಕ್ಷಾ ಅಭಿಯಾನ ತರಬೇತಿ ಕಾರ್ಯಕ್ರಮ.

ಕಂಪ್ಲಿ ಸೆ 16 : ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಈಚೆಗೆ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಬಳ್ಳಾರಿಯ ಅಜೀಮ್ ಪ್ರೇಮ್‍ಜಿ ಫೌಂಡೇಷನ್‍ಗಳ ಸಂಯುಕ್ತಾಶ್ರಯದಲ್ಲಿ ಕೊರೋನಾರೋಗ್ಯ ಸುರಕ್ಷಾ ಅಭಿಯಾನದಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಗೌಸಿಯಾ ಬೇಗಂ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿನ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಎಸ್.ಎನ್.ಪೇಟೆ, ವಿನಾಯಕ ನಗರ ಮತ್ತು ಹೌಸಿಂಗ್ ಬೋರ್ಡ್ ಕಾಲನಿಗಳನ್ನು ಕರೊನಾ ಸೋಂಕು ತೀವ್ರತಾ ಪ್ರದೇಶಗಳೆಂದು ಗುರುತಿಸಲಾಗಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿ, ಹತ್ತು ವರ್ಷದೊಳಗಿನ ಮಕ್ಕಳು, ಅರವತ್ತು ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ ಬಹು ವಿಧ ರೋಗಿಗಳನ್ನು ಪತ್ತೆ ಮಾಡಿ ಕರೊನಾ ಸೋಂಕು ಲಕ್ಷಣಗಳ ಕುರಿತು ತಪಾಸಣೆ ನಡೆಸಬೇಕಿದೆ. ಕೊರೋನಾ ಮುಕ್ತ ತಾಲೂಕನ್ನಾಗಿ ರೂಪಿಸುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಜೀಮ್ ಪ್ರೇಮ್‍ಜಿ ಫೌಂಡೇಶನ್ನಿನ ಸಂಚಾಲಕ ಉದಯ್ ಬೇಕಲ್, ತರಬೇತುದಾರರಾದ ಶ್ವೇತಾ, ಕರೀಷ್ಮಾ 40ಜನ ಆಶಾ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೆದಾರ ರೇಖಾ ಮಠ, ವೈಷ್ಣವಿ, ಪಿ.ಸಿ.ಅಂಜಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಚನ್ನಬಸವರಾಜ, ಪ್ರಭಾಕರ, ಶೋಭಾ, ಲಕ್ಷ್ಮಿದೇವಿ, ಉಮಾದೇವಿ, ಸುನಿತಾ, ಕಂದಾಯ ಇಲಾಖೆ, ನಾಡಕಚೇರಿ ಸಿಬ್ಬಂದಿಗಳನೇಕರು ಪಾಲ್ಗೊಂಡಿದ್ದರು.