ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಆಗ್ರಹ

ಕಂಪ್ಲಿ, ಜ.09: ಬಳ್ಳಾರಿ ಜಿಲ್ಲೆಗೆ ಸೇರಿಸಿದ ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರ.ಕಾರ್ಯದರ್ಶಿ ಮಣ್ಣೂರು ನಾಗರಾಜ ನೇತೃತ್ವದಲ್ಲಿ ಕಂಪ್ಲಿಯ ಇನ್ನಿತರೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.
ಬಿಎಸ್‍ಪಿ ರಾಜ್ಯ ಪ್ರ. ಕಾರ್ಯದರ್ಶಿ ಮಣ್ಣೂರು ನಾಗರಾಜ ಮಾತನಾಡಿ, ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಿದಲ್ಲಿ ಕಂಪ್ಲಿ ಮತ್ತು ಕಂಪ್ಲಿ ತಾಲೂಕಿನ ಸಮಸ್ತ ಗ್ರಾಮಗಳ ಜನತೆಗೆ ಅನುಕೂಲವಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ತಾಲೂಕು ಉಳಿದಲ್ಲಿ ಜನತೆಗೆ ತೊಂದರೆಯಾಗಿ ಪರಿಣಮಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ಸೇರಲು ಕಂಪ್ಲಿ ತಾಲೂಕಿನ ಜನತೆಗೆ ಒಪ್ಪಿಗೆ ಇರುವುದಿಲ್ಲ. ಈ ಹಿಂದೆ ವಿಜಯನಗರ ಜಿಲ್ಲೆ ರಚಿಸುವಂತೆ ಹೋರಾಟ ನಡೆದಾಗ ಕಂಪ್ಲಿ ತಾಲೂಕಿನ ಜನತೆ ಪಾಲ್ಗೊಂಡಿದ್ದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಂಪ್ಲಿಯೇ ನಾಂದಿಯಾಗಿದ್ದು, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಿದರಲ್ಲಿ ಸರ್ವದೃಷ್ಠಿಯಿಂದ ಸಮರ್ಪಕವಾಗುತ್ತದೆ. ಕಂಪ್ಲಿ ಒಳಗೊಂಡ ನೂತನ ವಿಜಯನಗರ ಜಿಲ್ಲೆಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವಲ್ಲಿ ಕಂಪ್ಲಿ ತಾಲೂಕು ಹೋರಾಟ ಸಮಿತಿ ಮುಖಂಡರಾದ ಕರೇಕಲ್ ಮನೋಹರ, ಸೈಯ್ಯದ್ ಉಸ್ಮಾನ್, ಇಟಗಿ ಬಸವರಾಜಗೌಡ, ಬಿ.ಜಾಫರ್ ಇತರರು ಇದ್ದರು.