ಕಂಪ್ಲಿಗೆ ದಿಢೀರ್ ಭೇಟಿ ನೀಡಿದ ಡಿಸಿ; ಪ್ರಮುಖ ಸಮಸ್ಯೆಗಳ ಬಗ್ಗೆ ಪರಿಶೀಲನೆ

ಕಂಪ್ಲಿ ಜೂ 10 : ಪಟ್ಟಣಕ್ಕೆ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಇಲ್ಲಿನ ಸೋಮಪ್ಪ ಕೆರೆ ಅಭಿವೃದ್ಧಿ ಕಾಮಗಾರಿ, ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆವರೆಗಿನ ರಸ್ತೆ ದುರಸ್ತಿ ಕಾರ್ಯ ಸೇರಿದಂತೆ ವಿವಿಧ ಪ್ರಮುಖ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿಗಳು ನೇರವಾಗಿ ಸ್ಥಗಿತಗೊಂಡಿರುವ ಸೋಮಪ್ಪ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಕಳೆದ ಕೆಲ ತಿಂಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಈವರೆಗೂ ಮುಗಿಯದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನಿಸಿದರು. ಆದರೆ, ಲಾಕ್‍ಡೌನ್‍ ಕಾರಣ ಹೇಳಿ ಅಧಿಕಾರಿಗಳು ಜಾರಿಕೊಳ್ಳಲು ಪ್ರಯತ್ನಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಸ್ಥಳೀಯ ಪುರಸಭೆಯ ಕೆಲ ಕಾಂಗ್ರೆಸ್ ಸದಸ್ಯರು ಕೆರೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಗುತ್ತಿಗೆದಾರ ಹಾಗು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸದಸ್ಯರ ಒತ್ತಾಯದ ಬಳಿಕ ಈಗಾಗಲೇ ಪೂರ್ಣಗೊಂಡಿರುವ ಕೆರೆಯ ಕಾರಿಡಾರ್ ರಸ್ತೆ ಹಾಗು ರಸ್ತೆ ಬದಿಯ ಕಲ್ಲಿನ ಗೋಡೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರು. ಅಲ್ಲಲ್ಲಿ ರಸ್ತೆ ಬದಿಯ ಗೋಡೆಗಳಲ್ಲಿ ಕಲ್ಲುಗಳು ಉದುರಿಬಿದ್ದಿದ್ದನ್ನು, ಅದನ್ನು ಸರಿಪಡಿಸದಿರುವುದನ್ನು ಗಮನಿಸಿದಾಗ ಡಿಸಿ ಪುರಸಭೆಯ ಜೆಇ ಗೋಪಾಲ್‍ರನ್ನ ತೀವ್ರ ತರಾಟೆಗೆ ತೆಗೆದುಕೊಂಡರು.
ಇನ್ನು ಕೆರೆಯ ಮಧ್ಯ ಭಾಗದಲ್ಲಿ ಅಲ್ಲಲ್ಲಿ ಅಗೆಯಲಾದ ಮಣ್ಣನ್ನು ತೆರವುಗೊಳಿಸದಿರುವುದರ ಬಗ್ಗೆಯೂ ಪ್ರಶ್ನಿಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಬಳಿಕ ಕೆರೆ ಕಾಮಗಾರಿಗೆ ಸಂಬಂಧಿಸಿದ ನಕ್ಷೆ ಹಾಗು ದಾಖಲೆಗಳ ಬಗ್ಗೆ ಮಾಹಿತಿ ಪಡೆದು ಆದಷ್ಟು ಬೇಗ ಕೆರೆ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲದೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ದುರಸ್ತಿಗೊಳ್ಳಬೇಕಿದ್ದ ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆವರೆಗಿನ ರಸ್ತೆಮಾರ್ಗಕ್ಕೆ ಭೇಟಿ ನೀಡಿ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ತದನಂತರದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ ಜಿಲ್ಲಾಧಿಕಾರಿ ಆಸ್ಪತ್ರೆಯಲ್ಲಿನ ಸ್ವಚ್ಚತೆ ಹಾಗು ಮೂಲಭೂತ ಸೌಕರ್ಯಗಳ ಬಗೆಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿನ ಅನಗತ್ಯ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಾಗು ಆಸ್ಪತ್ರೆ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಸೌಲಭ್ಯ ಕಲ್ಪಿಸಿಕೊಡುವುದಾಗಿ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಲ ಸಾರ್ವಜನಿಕರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ದೂರಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕನಿಷ್ಠ ಕುಡಿವ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆದರು. ಸಾರ್ವಜನಿಕರ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಅಸ್ಪತ್ರೆಯಲ್ಲಿನ ಲೋಪಗಳನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ಹಾಗು ಅಗತ್ಯವಿರುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸುವಂತೆ ವೈದ್ಯಾಧಿಕಾರಿ ರಾಧಿಕಾ ಅವರಿಗೆ ಸೂಚಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪಕ್ಕದಲ್ಲಿ ನಿಯೋಜನೆಗೊಂಡಿರುವ 100 ಹಾಸಿಗೆಯ ಆಸ್ಪತ್ರೆ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮಪ್ಪ ಕೆರೆ ಕಾಮಗಾರಿ ವೀಕ್ಷಣೆ ನಡೆಸಿದ್ದು ಕಾಮಗಾರಿಯಲ್ಲಿ ಕೆಲ ನ್ಯೂನ್ಯತೆಗಳಿರುವುದು ಕಂಡುಬಂದಿದ್ದು ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇನ್ನು ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆವರೆಗಿನ ರಸ್ತೆ ದುರಸ್ತಿ ಕಾಮಗಾರಿಯ ವಿಚಾರ ನ್ಯಾಯಾಲಯದಂಗಳದಲ್ಲಿದ್ದು, ಸಮಸ್ಯೆ ಇತ್ಯರ್ಥದ ಬಳಿಕ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಕ್ರಮೇಣ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದು, ಜೂ.14ರ ಬಳಿಕ ಸರ್ಕಾರದ ಸೂಚನೆಯನ್ವಯ ಲಾಕ್‍ಡೌನ್‍ ಸಡಿಲಿಕೆ ಅಥವಾ ಅನ್‍ಲಾಕ್ ಬಗ್ಗೆ ಚಿಂತನೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ, ಕಂದಾಯ, ಆರೋಗ್ಯ, ಲೋಕೋಪಯೋಗಿ, ಭೂ ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಪುರಸಭೆ ಸದಸ್ಯರು ಸೇರಿದಂತೆ ಅನೇಕರಿದ್ದರು.