ಕಂಪ್ಯೂಟರ್ ವಿಜ್ಞಾನದ ಯೋಜನಾ ಪ್ರದರ್ಶನ: ಕೌಶಲ್ಯಾಭಿವೃದ್ಧಿ ಪ್ರೇರೇಪಿಸಲು ಕರೆ

ಕಲಬುರಗಿ.ಏ.08:ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಬಹಳ ಮುಖ್ಯವಾದ ಉದ್ಯೋಗ ಅಭಿವೃದ್ಧಿಗೆ, ಜ್ಞಾನವನ್ನು ಪಡೆಯಲು ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುವ ಕೌಶಲ್ಯ ಅಭಿವೃದ್ಧಿ ಶ್ಲಾಘನೀಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವಿ. ಅಲಗವಾಡಿ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆಯೋಜಿಸಿದ್ದ ಪ್ರಾಜೆಕ್ಟ್ ಎಕ್ಸಿಬಿಷನ್ 2020-2021 ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕೌಶಲ್ಯ ಅಭಿವೃದ್ಧಿಯನ್ನು ಪ್ರೇರೇಪಿಸುವ ಕ್ರಮವನ್ನು ಕೈಗೊಂಡ ಕಂಪ್ಯೂಟರ್ ವಿಜ್ಞಾನ ವಿಭಾಗವನ್ನು ನಾನು ಅಭಿನಂದಿಸುತ್ತೇನೆ ಎಂದರು.
ಪ್ರದರ್ಶನವು ಕಂಪ್ಯೂಟರ್ ಸೈನ್ಸ್ ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿವಿಧ ಶಾಲೆಗಳು ಮತ್ತು ಇಲಾಖೆಗಳ ಜೆನೆರಿಕ್ ಎಲೆಕ್ಟಿವ್ ವಿದ್ಯಾರ್ಥಿಗಳು ಮಾಡಿದ 18 ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರಿ ಕುಲಸಚಿವ ಪ್ರೊ. ಅಸ್ಲಂ ಅವರು ಮಾತನಾಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಸೈನ್ಸ್ ಪ್ರದರ್ಶನವನ್ನು ಆಯೋಜಿಸಿದೆ, ಜೆನೆರಿಕ್ ಎಲೆಕ್ಟಿವ್ ವಿದ್ಯಾರ್ಥಿಗಳಿಂದ ಇಂತಹ ಯೋಜನೆಗಳನ್ನು ಮಾಡಿಸಿರುವುದು ಗಮನಾರ್ಹ, ಇದಕ್ಕಾಗಿ ನಾನು ಇಲಾಖೆಗೆ ಶುಭ ಹಾರೈಸುತ್ತೇನೆ ಎಂದರು.