ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಶೈಕ್ಷಣಿಕ ಪ್ರವಾಸ

ಸಿರವಾರ,ಜೂ.೧೧-
ಪ್ರವಾಸ ಎಂಬುದು ನಮ್ಮ ಉತ್ಸಾಹವನ್ನು ನವೀಕರಿಸಿಕೊಳ್ಳುವ ಒಂದು ಉತ್ತಮ ವಿಧಾನ. ಹೊಸ ಜಾಗ, ಹೊಸ ಜನ, ಹೊಸ ತಿಳುವಳಿಕೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಉತ್ಸಾಹವನ್ನು ತಂದುಕೊಡಬಲ್ಲವು. ಪ್ರವಾಸ ಎಂಬುದು ಉದ್ದೇಶವೇ ಇಲ್ಲದ ಸುತ್ತಾಟವಾಗದೆ ಬದುಕಿಡೀ ಹಸಿರಾಗಿ ಉಳಿಯುವಂಥ ಕ್ಷಣಗಳ, ಅರ್ಥಪೂರ್ಣ ಸಂಗತಿಗಳು, ಸಂಭ್ರಮದ ಬೆರಗಿನ ಘಟನೆಗಳ ಸಂಗ್ರಹದ ದಾರಿಯಾದರೆ ಅದಕ್ಕಿಂತ ಸಾರ್ಥಕತೆ ಬೇರೊಂದಿಲ್ಲ ಎಂದು ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಕಂಪ್ಯೂಟರ್ ತರಬೇತಿ ಸಂಸ್ಥೆಯ ಅಧ್ಯಕ್ಷ ವೆಂಕಟರೆಡ್ಡಿ ಬಲಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರದ ವತಿಯಿಂದ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಭಾನುವಾರ ಕೈಗೊಳ್ಳಲಾಯಿತು.
ಪ್ರವಾಸದಲ್ಲಿ ಅಂಜನಾದ್ರಿ ಬೆಟ್ಟ, ಹಂಪಿ, ಕಿಷ್ಕಿಂದಾ, ಹೊಸಪೇಟೆ ಜಲಾಶಯ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳ ಭೇಟಿಯ ವ್ಯವಸ್ಥೆ ಮಾಡಲಾಗಿದೆ.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ಲಿಂಗಣ್ಣಗೌಡ ಬಲ್ಲಟಗಿ, ಸಹ ಶಿಕ್ಷಕಿ ಮಹೇಶ್ವರಿ ಬಿಚ್ಚಾಲಿ, ವಿದ್ಯಾರ್ಥಿಗಳು ಇದ್ದರು.