ಕಂಪ್ಯೂಟರ್ ಆಪರೇಟರ್ ಬದಲಾವಣೆ ಆಗ್ರಹಿಸಿ ಧರಣಿ

ಸಿರವಾರ,ಮೇ.೨೬-
ತಾಲೂಕಿನ ಹಿರೇಹಣಗಿ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರಾಗಿ ಕೆಲಸ ಮಾಡುತ್ತಿರುವ ವಿಶ್ವನಾಥ ಇವರನ್ನು ಸೇವೆಯಿಂದ ತೆಗೆದು ಹಾಕಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು. ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಮಾದಿಗ ದಂಡೋರ ತಾಲೂಕ ಸಮಿತಿಯಿಂದ ತಾಲೂಕ ಪಂಚಾಯತಿ ಮುಂದೆ ಧರಣಿ ಹಮ್ಮಿಕೊಂಡು ಒತ್ತಾಯಿಸಿದ್ದಾರೆ. ತಾಲೂಕಿನ ಹಿರೇಹಣಗಿ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರಾಗಿ ಕೆಲಸ ಮಾಡುತ್ತಿರುವ ವಿಶ್ವನಾಥ ಲಿಂಗಸೂಗೂರು ತಾಲೂಕಿನವರಾಗಿದ್ದು, ಈತನು ಗ್ರಾ.ಪಂ. ಬರುವಂತಹ ಅನುದಾನಗಳೆಲ್ಲಾವನ್ನು ದುರ್ಬಳಕೆ ಮಾಡುವಲ್ಲಿ ಪ್ರಮುಖ ಪಾತ್ರಕ್ಕೆ ದಾರಿಯಾಗಿರುತ್ತಾನೆ. ಈತನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಂತೆ ವರ್ತಿಸುತ್ತಿದ್ದು, ತನಗೆ ಸಂಬಂಧಿಸಿದ ಯಾವುದೇ ಫೈಲ್‌ಗಳನ್ನು ಸರಿಯಾದ ರೀತಿಯಲ್ಲಿ ಇಟ್ಟಿರುವುದಿಲ್ಲ. ಈತನಿಂದಾಗಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳೆಲ್ಲವು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವುದು.
ಮಾತ್ರವಲ್ಲದೇ, ಇತರೆ ಸಿಬ್ಬಂದಿಗಳಾದ ಅರಳಪ್ಪ ತಂದೆ ದೇವಪ್ಪ ಇವರು ದಿನಾಂಕ: ೨೯/೦೯/೨೦೧೫ ರಂದು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರಾಗಿ ಸೇವೆಗೆ ಸೇರಿರುತ್ತಾರೆ. ಇವರು ಸುಮಾರು ೦೮ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈತನಿಗೆ ಸರಿಯಾದ ರೀತಿಯಲ್ಲಿ ವೇತನ ಪಾವತಿ ಮಾಡದೇ ೬೦ ತಿಂಗಳ ವೇತನ ಬಾಕಿ ಇಟ್ಟಿರುತ್ತಾರೆ. ಇದರಿಂದಾಗಿ ಕುಟುಂಬದ ಉಪಜೀವನ ನಡೆಸಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
೧೫ನೇ ಹಣಕಾಸು ಮತ್ತು ನರೇಗಾ ಯೋಜನೆಯಡಿಯಲ್ಲಿ ಯಾವುದೇ ಕಾಮಗಾರಿಗಳು ಮಾಡದೇ, ನಕಲಿ, ಬಿಲ್‌ಗಳನ್ನು ಸೃಷ್ಠಿಸಿ, ಲಕ್ಷಾಂತರ ರೂಪಾಯಿಗಳ ಭೋಗಸ್ ಬಿಲ್ ಎತ್ತುವಳಿ ಮಾಡಿರುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೊಳಪಡಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ತಾಲೂಕ ಪಂಚಾಯತ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಫಕಿರಪ್ಪ ಕಡದಿನ್ನಿ, ರವಿಕುಮಾರ ಮದ್ಲಾಪೂರ, ಸದಾನಂದ, ಪೆದ್ದಪ್ಪ ಹಿರೆಹಣಗಿ, ಶಂಕರ ಮರಾಟ, ಮೌನೇಶ ಮರಾಟ ಇನ್ನಿತರರು ಇದ್ದರು.