ಕಲಬುರಗಿ,ಜೂ.26-ಇಲ್ಲಿನ ರಾಜ್ಯ ಮಹಿಳಾ ನಿಲಯದ ನಿವಾಸಿಯೊಬ್ಬರು ಮಹಿಳಾ ನಿಲಯದ ರಕ್ಷಕರ ಕಣ್ಣು ತಪ್ಪಿಸಿ ಕಂಪೌಂಡ್ ಗೋಡೆ ಜಿಗಿದು ಪರಾರಿಯಾದ ಘಟನೆ ನಡೆದಿದೆ.
ಮರಿಯಮ್ಮ ಗಂಡ ದೇವಪ್ಪಾ (20) ಎಂಬುವವರೆ ಮಹಿಳಾ ನಿಲಯದಿಂದ ಪರಾರಿಯಾಗಿದ್ದು, ಈ ಸಂಬಂಧ ನಿಲಯದ ಅಧೀಕ್ಷಕಿ ಅನುರಾಧಾ ಪಾಟೀಲ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮಹಿಳಾ ನಿಲಯದ ನಿವಾಸಿಯಾಗಿದ್ದ ಮರಿಯಮ್ಮ ಜೂ.24 ರಂದು ಬೆಳಿಗ್ಗೆ 6ಕ್ಕೆ ನಿಲಯದ ರಕ್ಷಕರ ಕಣ್ಣು ತಪ್ಪಿಸಿ ನಿಲಯದ ಗೇಟ್ ಹಿಂದಿನ ಕಂಪೌಂಡ್ ಗೋಡೆ ಜಿಗಿದು ಪರಾರಿಯಾಗಿದ್ದು, ನಿಲಯದ ರಕ್ಷಕರು ಮತ್ತು ಸಿಬ್ಬಂದಿಗಳು ಆಳಂದ ಚೆಕ್ ಪೋಸ್ಟ್, ಆಳಂದ ನಾಕಾ, ಬಸ್‍ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಶರಣಬಸವೇಶ್ವರ ದೇವಸ್ಥಾನ, ರಾಣೆಸ್ಪೀರ್ ದರ್ಗಾ ಸೇರಿದಂತೆ ಮತ್ತಿತರ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ನಿಲಯದಿಂದ ಪರಾರಿಯಾದ ಮರಿಯಮ್ಮ ಹಿಂದಿ, ಕನ್ನಡ, ತೆಲಗು, ತಮಿಳು ಭಾಷೆ ಮಾತನಾಡುತ್ತಾಳೆ. ಕಪ್ಪು ಬಣ್ಣ ಹೊಂದಿದ್ದು, ಕ್ರೀಮ್ ಕಲರ್ ಚೂಡಿದಾರ ಧರಿಸಿದ್ದಾಳೆ. ನಿಲಯದ ರಕ್ಷಕರ ಕಣ್ಣು ತಪ್ಪಿಸಿ ಪರಾರಿಯಾದ ಮರಿಯಮ್ಮಳ ಪತ್ತೆ ಹಚ್ಚುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರ್.ಜಿ.ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.