ಕಂಪನಹಳ್ಳಿ ಡೇರಿ: ೯೫ ಸಾವಿರ ರೂ. ಬೋನಸ್ ಹಂಚಿಕೆ

ಹುಳಿಯಾರು, ನ. ೯- ಹೋಬಳಿಯ ಕಂಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ೨೦೧೯-೨೦ ನೇ ಸಾಲಿನಲ್ಲಿ ಉತ್ಪಾದಕರಿಂದ ೮೫ ಲಕ್ಷ ರೂ. ಹಾಲು ಖರೀದಿಸಿದ್ದು, ೯೧ ಲಕ್ಷ ರೂ.ಗೆ ಮಾರಾಟ ಮಾಡಿ ವ್ಯಾಪಾರ ಲಾಭವಾಗಿ ೫.೭೭ ಲಕ್ಷ ರೂ. ಲಭಿಸಿದ್ದು ಇದರಲ್ಲಿ ಖರ್ಚು ತೆಗೆದು ೨.೨೩ ಲಕ್ಷ ರೂ. ನಿವ್ವಳ ಲಾಭ ಸಿಕಿದ್ದು, ಕೆಲ ನಿಧಿಗಳನ್ನು ತೆಗೆದಿಟ್ಟು ಉಳಿದ ೯೬ ಸಾವಿರ ರೂ.ಗಳನ್ನು ಉತ್ಪಾದಕರಿಗೆ ಬೋನಸ್ ಹಂಚಿಕೆ ಮಾಡಲು ನಿರ್ಧರಿಸಲಾಯಿತು.
ಕಂಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ನಡೆದ ೨೦೧೯-೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ ಸಭೆ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಾಲು ಹಾಕಲು ಡೇರಿಗೆ ಬರಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಹಜವಾಗಿ ಜನಸಂದಣಿ ಇರುತ್ತದೆ. ಹಾಗಾಗಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವಿದೆ. ಅಲ್ಲದೆ ಕೊರೊನಾ ಬಂದಿರುವ ವ್ಯಕ್ತಿಗಳು ಹಾಲು ಹಾಕಲು ಡೇರಿಗೆ ಬಾರದೆ ತಮ್ಮ ಕುಟುಂಬದವರಾರನ್ನಾದರೂ ಕಳುಹಿಸಿ ಸೋಂಕು ಇತರರಿಗೆ ಹರಡದಂತೆ ಸಹಕರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಹಾಲು ಹಾಕಿದ ಸುಮಿತ್ರಮ್ಮ ಮತ್ತು ರಾಜಮ್ಮ ಅವರುಗಳಿಗೆ ಬಹುಮಾನ ನೀಡಲಾಯಿತು. ನಿವೃತ್ತಿ ಅಂಚಿನಲ್ಲಿರುವ ತುಮುಲ್ ಉಪವ್ಯವಸ್ಥಾಪಕ ಎ.ಪಿ.ಯರಗುಂಟಪ್ಪ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಡೇರಿ ಅಧ್ಯಕ್ಷೆ ಗೌರಮ್ಮ ವಹಿಸಿದ್ದರು. ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಿ.ರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ, ಕಾರ್ಯಕಾರಿ ಮಂಡಳಿಯ ವಸಂತಕುಮಾರಿ, ವಸಂತ, ಚನ್ನಬಸಮ್ಮ, ಜಾನಕಮ್ಮ, ಜ್ಯೋತಿ, ಆಶಾ, ಪುಷ್ಪಲತಾ, ಸುಶೀಲಮ್ಮ, ವೀರಭದ್ರಯ್ಯ, ಕೊಟ್ಟೂರಯ್ಯ, ಪ್ರಕಾಶ್, ಮರುಳಪ್ಪ, ಚನ್ನಬಸಪ್ಪ, ಶಿವಣ್ಣ, ಗುರುವಾಪು ಶ್ರೀನಿವಾಸ್, ನಾಗಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.