ಕಂದಾಯ ಭೂಮಿ ಮಾರಾಟ ನಿಷೇಧ

ಬೆಂಗಳೂರು, ಜ.೧೦- ೨೦೧೩ನೇ ಸಾಲಿನ ನಂತರ ಪುರಸಭೆಯ ಹೊರಗೆ ನೋಂದಾಯಿಸಲಾದ ಕಂದಾಯ ಭೂಮಿಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ಭೂ ಪರಿವರ್ತನೆ ಇಲ್ಲದೆ ಕೃಷಿ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೋಂದಣಿ ಇಲಾಖೆಯಿಂದ ನೋಂದಾಯಿಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೆ, ಸಕ್ಷಮ ಪ್ರಾಧಿಕಾರ, ಪುರಸಭೆ ಅಥವಾ ಪಂಚಾಯಿತಿ ಯಿಂದ ಅನುಮತಿ ಇಲ್ಲದ ನಿವೇಶನಗಳನ್ನು ನೋಂದಾಯಿಸಲು ಸಾಧ್ಯವಿಲ್ಲ ಎಂದು ಎಲ್ಲ ಸಬ್ ರಿಜಿಸ್ಟ್ರಾರ್ ಗಳಿಗೆ ಸರ್ಕಾರ ಇತ್ತೀಚೆಗೆ ಮೆಮೋ ಹೊರಡಿಸಿದೆ.
೨೦೧೩ರ ನಂತರ ಯಾರಾದರೂ ಕಂದಾಯ ನಿವೇಶನ ಖರೀದಿಸಿದ್ದರೆ, ನಿವೇಶನ ಮಾರಾಟ, ಖರೀದಿ ಅಥವಾ ಮನೆ ನಿರ್ಮಾಣ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಉತ್ತರ ಬೆಂಗಳೂರಿನ ಬಿಜೆಪಿ ಹಿರಿಯ ಶಾಸಕರೊಬ್ಬರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಂದಾಯ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಧಿಕಾರಿಗಳು ಖಾಸಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಈ ನಡೆಯಿಂದ ಕಂದಾಯ ನಿವೇಶನಗಳಲ್ಲಿ ಹೂಡಿಕೆ ಮಾಡಿದ ನೂರಾರು ಮಧ್ಯಮ ವರ್ಗದ ಜನರು ಆತಂಕದಿಂದ ಇದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಹಲವಾರು ಕೋರಿದ್ದಾರೆ.