ಕಂದಾಯ ನಿರೀಕ್ಷಕನ ಹಲ್ಲೆ : ಕಂದಾಯ ನೌಕರರಿಂದ ವ್ಯಾಪಕ ಖಂಡನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ3: ಅಕ್ರಮ ಗಣಿಗಾರಿಕೆ ತಡೆಗೆ ಮುಂದಾದ ಪ್ರಭಾರ ಕಂದಾಯ ನಿರೀಕ್ಷಕ ಮತ್ತು ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೇರಿದ ಕಂದಾಯ ಇಲಾಖೆಯ ನೌಕರರು ಬಳ್ಳಾರಿ ತಾಲೂಕು ರೂಪನಗುಡಿ ಪ್ರಭಾರ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಗ್ರಾಮಲೆಕ್ಕಾಧಿಕಾರಿಗಳೊಂದಿಗೆ ಬಳ್ಳಾರಿ ಜಿಲ್ಲೆಯ ತೊಲಮಾಮಿಡಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ತೆರಳಿದ್ದರು. ಈ ವೇಳೆ ಅಕ್ರಮ ಮರಳುದಂಧೆಕೋರರು ಸ್ಥಳದಲ್ಲಿ ನೌಕರರ ಮೇಲೆ ಹಲ್ಲೆ ಮಾಡಿದ್ದಾರೆ. ಬೈಕ್‍ಗಳಿಗೂ ಹಾನಿ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ ರಾತ್ರಿ ಅಂದಾಜು 15 ರಿಂದ 20 ಜನ ಆಗಮಿಸಿ  ಮಾರಕಾಸ್ತ್ರಗಳಿಂದ ವೆಂಕಟಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಘಟನೆಗಳು ಈ ಹಿಂದೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಕೊಲೆ ಮಾಡಲಾಗಿದೆ. ರಾಜ್ಯದ ವಿವಿಧ ಕಡೆ ಕಂದಾಯ ಇಲಾಖೆಯ ನೌಕರರ ಮೇಲೆ ಪದೇ ಪದೆ ಮಾರಣಾಂತಿಕ ಹಲ್ಲೆಗಳು ಆಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನೌಕರರ ಭದ್ರತೆ ಹಿತ ದೃಷ್ಟಿಯಿಂದ ಸೂಕ್ತ ಕಾನೂನು ರೂಪಿಸಬೇಕು. ನೌಕರರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಂಡು ಗಡಿಪಾರು ಮಾಡಬೇಕು. ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ನೀಡಿ, ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಬೇಕು. ಸೂಕ್ತ ಪರಿಹಾರ ಕೂಡ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಬಸವರಾಜ್ ಸೇರಿದಂತೆ ಇತರರು ಪ್ರತಿಭಟನಾ ವೇಳೆ ಹಾಜರಿದ್ದರು.