ಕಂದಾಯ ನಡಿಗೆ ಚಿಕ್ಕಜಾಯಿಗನೂರಿನ ಕಡೆಗೆ: ಗ್ರಾಮವಾಸ್ತವ್ಯದಲ್ಲಿ 71ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕಂಪ್ಲಿ ಮಾ 21 : ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಕಂದಾಯ ನಡಿಗೆ ಗ್ರಾಮಗಳ ಕಡೆಗೆ ಅಭಿಯಾನದಡಿಯಲ್ಲಿ ತಾಲೂಕಾಡಳಿತ ವತಿಯಿಂದ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 71ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಗೊಂಡಿವೆ.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ದಂಡಾಧಿಕಾರಿ ಗೌಸಿಯಾಬೇಗಂ ನೇತೃತ್ವದಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಚಿಕ್ಕಜಾಯಿಗನೂರು ಗ್ರಾಮದ ಪ್ರತಿ ವಾರ್ಡ್‍ಗಳಲ್ಲಿ ಮನೆ ಮನೆಗೆ ಭೇಟಿ ನೀಡಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಿತು.
ಬಳಿಕ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ರಚಿಸಲಾಗಿದ್ದ ಕೌಂಟರ್‍ಗಳಲ್ಲಿ ದೂರುಗಳನ್ನು ಸ್ವೀಕರಿಸಲಾಯಿತು. ಹೀಗೆ ಸಲ್ಲಿಕೆಗೊಂಡ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲು ಅರ್ಜಿಗಳ ಪೈಕಿ ಕೆಲ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಯಿತು. ಇನ್ನುಳಿದ ಅರ್ಜಿಗಳನ್ನು ತಾಲೂಕಾಡಳಿತದ ಅಧಿಕಾರಿಗಳ ತಂಡ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನೀಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಯಿತು.
ಗ್ರಾಮವಾಸ್ತವ್ಯದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಗೌಸಿಯಾಬೇಗಂ, ಮೂಲಭೂತ ಸೌಕರ್ಯ ಸಮಸ್ಯೆ ಸೇರಿದಂತೆ ತರಹೇವಾರಿ ಸಮಸ್ಯೆಗಳಿಗೆ ಖುದ್ದು ಅಧಿಕಾರಿಗಳೇ ಹಳ್ಳಿಗರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಗ್ರಾಮವಾಸ್ತವ್ಯ ಎನ್ನುವ ವಿಭಿನ್ನ ಬಗೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಅಂತೆಯೇ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಹಮ್ಮಿಕೊಂಡಿಉರವ ಗ್ರಾಮವಾಸ್ತವ್ಯ ಕಾರ್ಯಕ್ರಮವು ತಾಲೂಕಿನಲ್ಲಿ ಎರಡನೇ ಕಾರ್ಯಕ್ರಮವಾಗಿದ್ದು, ಗ್ರಾಮದ ಸಾಕಷ್ಟು ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ಅಹವಾಲು ಸ್ವೀಕೃತಗೊಂಡ ತಕ್ಷಣದಲ್ಲೇ ಕೆಲ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗಿದೆ. ಇನ್ನೂ ಕೆಲ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಹಂತ ಹಂತವಾಗಿ ಇತ್ಯರ್ಥ ಪಡಿಸಲಾಗುವುದು. ಇನ್ನು ಸಾರ್ವಜನಿಕರಿಂದ ಸಮಸ್ಯೆಗಳ ಅರ್ಜಿ ಸ್ವೀಕಾರಕ್ಕಾಗಿ ರಚಿಸಲಾಗಿರುವ ವಿವಿಧ ಇಲಾಖೆಗಳ ಕೌಂಟರ್‍ಗಳ ಪೈಕಿ ಕಂದಾಯ ಇಲಾಖೆಗೆ 18 ಅರ್ಜಿಗಳು, ಆರ್‍ಡಿಪಿಆರ್ 41, ಕೆಎಸ್‍ಆರ್‍ಟಿಸಿ 4, ನೀರಾವರಿ ಇಲಾಖೆ 2, ಲೋಕೋಪಯೋಗಿ 3, ಆರೋಗ್ಯ ಇಲಾಖೆ 1, ಸರ್ವೆ ಇಲಾಖೆಗೆ 1 ಸೇರಿದಂತೆ 71 ಕ್ಕೂ ಅಧಿಕ ಅಹವಾಲು ಅರ್ಜಿಗಳು ಸ್ವೀಕರಿಸಲಾಗಿದೆ. ಸಾಧ್ಯವಾದಷ್ಟು ಗ್ರಾಮ ವಾಸ್ತವ್ಯದಂತಹ ವೇದಿಕೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದು ಸಲಹೆ ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ತಾಪಂ ಅಧ್ಯಕ್ಷೆ ಕೆ.ಉಮಾದೇವಿ, ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಕಾಟಚಾರಕ್ಕೆ ಮಾಡದೇ, ಗ್ರಾಮದ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ವೇದಿಕೆಯಾಗಬೇಕು. ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಪ್ರತಿಯೊಂದು ಸಾರ್ವಜನಿಕರ ಅರ್ಜಿಗಳಿಗೆ ಪರಿಹಾರ ಸಿಗುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ 6 ಜನ ಪಿಂಚಣಿದಾರರಿಗೆ ಆದೇಶ ಪತ್ರಗಳನ್ನು ವಿತರಣೆ ಮಾಡಲಾಯಿತು. ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಪವಿತ್ರಾ ಅವರಿಗೆ ಬಹುಮಾನ ನೀಡಲಾಯಿತು.