ಕಂದಾಯ ಗ್ರಾಮಗಳಾಗಿ 1400 ತಾಂಡಗಳ ಪರಿವರ್ತನೆ


ಬೆಂಗಳೂರು, ಸೆ. ೧೫- ರಾಜ್ಯದಲ್ಲಿರುವ ಲಂಬಾಣಿ ತಾಂಡಗಳ ಪೈಕಿ ೧೪೦೦ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಪರಿಷತ್‌ನಲ್ಲಿಂದು ತಿಳಿಸಿದ್ದಾರೆ.
ತುಳಿತಕ್ಕೊಳಗಾದ ಸಮಾಜಕ್ಕೆ ನಾಗರಿಕ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಲಂಬಾಣಿ ತಾಂಡಗಳು ಮತ್ತು ಭೋವಿ ಸಮುದಾಯದ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಅವರು, ಲಂಬಾಣಿ ತಾಂಡಗಳು ಮತ್ತು ಭೋವಿಸಮುದಾಯದ ಹಟ್ಟಿಗಳು ಅರಣ್ಯ ಭೂಮಿಯಲ್ಲಿರಲಿ, ಅಥವಾ ಸರ್ಕಾರಿ ಭೂಮಿಯಲ್ಲಿರಲಿ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಅವರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಪ್ರಕಾಶ್ ರಾಥೋಡ್, ರಾಜ್ಯದಲ್ಲಿ ೫ ಸಾವಿರಕ್ಕೂ ಅಧಿಕ ಲಂಬಾಣಿ ತಾಂಡಗಳಿವೆ. ಇಂದಿಗೂ ಈ ತಾಂಡಗಳು ಮೂಲ ಸೌಲಭ್ಯ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆದಷ್ಟು ಶೀಘ್ರ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು.