ಕಂದಾಯ ಅದಾಲತ್ ಸದ್ಬಳಕೆಗೆ ಗ್ರಾಮೀಣರಿಗೆ ಮನವಿ

ತಿಪಟೂರು, ಜು. ೨೩- ರೈತರಿಗೆ ಆಡಳಿತದಲ್ಲಿ ಅನುಕೂಲವಾಗುವಂತೆ ಕಂದಾಯ ವಿಭಾಗವೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದುದರಿಂದ ರೈತರು ತಮ್ಮ ಜಮೀನಿನ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ಎಂದು ಗ್ರೇಡ್ ೨ ತಹಶೀಲ್ದಾರ್ ಜಗನ್ನಾಥ್ ಹೇಳಿದರು.
ನಗರದ ಕಲ್ಪತರು ಸಭಾಂಗಣದಲ್ಲಿ ನಡೆದ ಭಾರತೀಯ ಕಿಸಾನ್ ಸಂಘ-ಕರ್ನಾಟಕ ತಿಪಟೂರು ಘಟಕದ ವತಿಯಿಂದ ರೈತರಿಗೆ ಒಂದು ದಿನದ ಅಭ್ಯಾಸ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹಾಗೂ ಸಾರ್ವಜನಿಕರು ಈ ನಿಟ್ಟಿನಲ್ಲಿ ಪೌತಿ ಖಾತೆಗಳನ್ನು ಬದಲಾವಣೆಗೆ ಇದ್ದ ಸಮಯವನ್ನು ಕಡಿಮೆಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ರೈತರುಗಳು ಸಂಘಟನೆಗಳ ಮೂಲಕ ಜಾಗೃತರಾಗಿ ಸಮರ್ಪಕ ಕಾರ್ಯನಿರ್ವಹಣೆಗೆ ಮುಂದಾದಾಗ ಇಲಾಖೆಗಳು ಮತ್ತು ರೈತರ ನಡುವೆ ಸಂಬಂಧ ವೃದ್ಧಿಯಾಗುತ್ತದೆ. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಕಂದಾಯ ಅದಾಲತ್‌ಗಳನ್ನು ಮಾಡುತ್ತಿದ್ದು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಲವು ರೈತರು ಇಲಾಖೆಗಳ ಅಧಿಕಾರಿಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಪ್ರತಿಯೊಬ್ಬ ರೈತರು ಇಲಾಖೆಗಳಿಗೆ ಭೇಟಿ ಕೋಟ್ಟು ಸಮಸ್ಯೆ ತಿಳಿಸಿದಾಗ ಪ್ರತಿಯೊಬ್ಬ ಅಧಿಕಾರಿಯೂ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ. ಸರ್ಕಾರಗಳು ರೈತರಿಗೆ ಅನುಕೂಲವಾಗುವಂತೆ ಪ್ರತಿಯೊಂದು ಕಾರ್ಯವನ್ನು ಆನ್‌ಲೈನ್ ಮೂಲಕವೇ ಮಾಡುತ್ತಿದ್ದು ಇಲಾಖೆಗಳಿಗೆ ಬಂದು ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಅನೇಕ ಸೌಲಭ್ಯ, ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈಗ ಹೋಬಳಿ ಮಟ್ಟದಲ್ಲಿಯೂ ರೈತ ಸೇವಾ ಕೇಂದ್ರಗಳನ್ನು ತೆರೆದಿದ್ದು ರೈತರಿಗೆ ಅನೇಕ ಇಲಾಖೆಗಳ ಸಮಗ್ರ ಮಾಹಿತಿ ದೊರೆಯುತ್ತದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಕೇಶವಮೂರ್ತಿ ಮಾತನಾಡಿ, ರೈತರು ಇಲಾಖೆಗಳಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ತಮ್ಮ ಜಮೀನಿನ ದಾಖಲೆ ಪತ್ರಗಳನ್ನು ಇಟ್ಟುಕೊಂಡಿರಬೇಕು. ಇಲ್ಲವಾದಲ್ಲಿ ತ್ವರಿತವಾಗಿ ಕಂದಾಯ ವಿಭಾಗಕ್ಕೆ ಸಂಪರ್ಕಿಸಿ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ಮಾಡುವಂತೆ ತಿಳಿಸಿದರು.
ಸರ್ಕಾರದಿಂದ ಉತ್ತಮ ತಳಿಯ ಬೀಜ, ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಸದುಪಯೋಗವನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಕೃಷಿಯ ಬಗ್ಗೆ ಇಲಾಖೆಗಳಿಂದ ಮಾಹಿತಿ ಪಡೆದು ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವಂತಹ ಬೆಳೆಯನ್ನು ಪಡೆದುಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ಹೊಸ-ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ರೈತರಿಗೆ ಅನುಕೂಲವಾಗುವ ಯಂತ್ರಗಳನ್ನು ತಯಾರಿಸಿದ್ದು ಇವುಗಳ ಬಳಕೆಗೆ ರೈತರು ಮುಂದಾಗಬೇಕಿದೆ. ತಮ್ಮ ಜಮೀನುಗಳಲ್ಲಿ ಮಿಶ್ರ ಬೆಳೆ ಬೆಳೆಯಲು ಮುಂದಾದಾಗ ಮಾತ್ರ ಆರ್ಥಿಕ ಸದೃಢತೆಯನ್ನು ಸಾಧಿಸಬಹುದಾಗಿದೆ ಎಂದರು.
ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ರಂಗಾಪುರ ಮಾತನಾಡಿ, ಇಲಾಖೆಗಳ ಮತ್ತು ರೈತರು ನಡುವೆ ಅವಿನಾಭಾವ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಕಾರ್ಯಗಾರವನ್ನು ಮಾಡುತ್ತಿದ್ದು ರೈತರನ್ನು ಜಾಗೃತಗೊಳಿಸುವ ಉದ್ದೇಶವನ್ನು ಸಂಘಟನೆ ಹೊಂದಿದೆ. ವಿನಾಃ ಕಾರಣ ಅಧಿಕಾರಿಗಳೊಂದಿಗೆ ಸಂಘರ್ಷ ನಡೆಸುವ ಬದಲು ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕು. ದೇಶದ ಎಲ್ಲ ರೈತರು ಒಂದಾದಾಗ ಮಾತ್ರವೇ ರೈತರ ಅಭಿವೃದ್ಧಿ, ಆರ್ಥಿಕ ಸದೃಢತೆ ಸಾಧ್ಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರಸ್ವಾಮಿ ಮಾತನಾಡಿ, ವಿದ್ಯುತ್ ಇಲಾಖೆಯಲ್ಲಿ ರೈತರಿಗೆ ಅಸಮರ್ಪಕ ಮಾಹಿತಿ ಕೊರತೆಯಿಂದ ಅಲ್ಲಿ ಯಾವ ವಿಭಾಗದಲ್ಲಿ ಯಾವ ಅಧಿಕಾರಿ ಹತ್ತಿರ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಕೊರತೆಯಿದೆ. ಅದುದರಿಂದ ರೈತರು ಸಂಘಟಿತರಾಗಿ ಭಾರತೀಯ ಕಿಸಾನ್ ಸಂಘದ ಸದಸ್ಯತ್ವವನ್ನು ಪಡೆದುಕೊಂಡು ಮಾಹಿತಿಯನ್ನು ಪಡೆಯಿರಿ ಎಂದರು.
ಕೊನೆಹಳ್ಳಿಯ ಆಯುಷ್ ವೈಧ್ಯಾಧಿಕಾರಿ ಡಾ.ಸುಮನಾ ಮಾತನಾಡಿ, ಪ್ರಾಚೀನ ಕಾಲದಿಂದಲೂ ಗೋವಿಗೂ ಹಾಗೂ ಆರ್ಯವೇದಕ್ಕೂ ಅವಿನಾಭವ ಸಂಬಂಧವಿದೆ. ಅದರೆ ಇತ್ತೀಚೀನ ದಿನಗಳಲ್ಲಿ ಮನುಷ್ಯನು ತನ್ನ ಜಾಗತಿಕ ಮಟ್ಟದಲ್ಲಿ ಒತ್ತಡದ ಬದುಕಿನಲ್ಲಿ ಜೀವಿಸುತ್ತಿದ್ದು ಇದರಿಂದ ಹೊರಬರಲು ಯೋಗ, ಆರ್ಯವೇದ ಉತ್ತಮ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಾಲು ಮಂಡಳದ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್, ಹಳೇಪಾಳ್ಯ ಸೋಮಶೇಖರ್, ಭೈರಾಪುರ ಶಶಿಧರ್, ಭಾರತೀಯ ಕಿಸಾನ್ ಸಂಘ-ಕರ್ನಾಟಕ ಘಟಕದ ಪ್ರಾಂತ ಕಾರ್ಯದರ್ಶಿ ನೆಲಮಂಗಲ ಸುರೇಶ್‌ಕುಮಾರ್, ಪ್ರಾಂತ ಕಾರ್ಯದರ್ಶಿ ಸಂತೋಷ್, ಪ್ರಶಾಂತ್ ಕರೀಕೆರೆ, ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಮಹಿಳಾ ಘಟಕದ ಪ್ರಮುಖರಾದ ನವೀನ ಸದಾಶಿವಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಬಿಳಿಗೆರೆಪಾಳ್ಯದ ಚಂದ್ರಶೇಖರ್, ಗೌರವಾಧ್ಯಕ್ಷ ಶಂಕರಮೂರ್ತಿ ರಂಗಾಪುರ, ಪ್ರಧಾನ ಕಾರ್ಯದರ್ಶಿ ನವೀನ್ ಸಾಸಲಹಳ್ಳಿ, ರವಿ ಜಕ್ಕನಹಳ್ಳಿ, ಚಂದ್ರು ದಾಸನಕಟ್ಟೆ, ಶಿವಾನಂದಮತ್ತಿಹಳ್ಳಿ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.