ಕಂದಕಕ್ಕೆ ಬಿದ್ದಆನೆ ಸಾವು ಮರಿಗೆ ಆರೈಕೆ

ಬೆಂಗಳೂರು, ಸೆ.೧೦- ತನ್ನ ತಾಯಿ ಆನೆಯ ನಿಧನದಿಂದ ಅನಾಥವಾಗಿ ಕಾಡಿನಲ್ಲಿ ದನಗಳ ಹಿಂಡಿನಲ್ಲಿದ್ದ ಮುದ್ದಾದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಆಶ್ರಯಕ್ಕೆ ತಂದು ಆರೈಕೆ ಮಾಡುತ್ತಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು ಒಂದೂವರೆ ತಿಂಗಳ ವಯಸ್ಸಿನ ಮರಿಯಾಗಿದ್ದು ಕಾವೇರಿ ವನ್ಯಜೀವಿ ವಲಯದ ಧಾಮಕ್ಕೆ ಹೊಂದಿಕೊಂಡಂತೆ ಇರುವ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯವಾಗಿದ್ದು, ಆಗ್ಗಾಗ್ಗೆ ಆನೆಗಳ ಗುಂಪು ಊರಿನತ್ತ ಬಂದು ರೈತರ ಬೆಳೆಗಳನ್ನು ನಾಶಮಾಡಿ ಹೋಗುತ್ತಿತ್ತು. ಹೀಗೆ ಗುಂಪಿನಲ್ಲಿ ಓಡಾಡಿಕೊಂಡಿದ್ದ ಆನೆಗಳ ಪೈಕಿ ಒಂದಾನೆ ಈಚೆಗಷ್ಟೇ ಮರಿಯೊಂದಕ್ಕೆ ಜನ್ಮ ನೀಡಿದ್ದು ನಂತರದ ದಿನಗಳಲ್ಲಿ ಆ ಹೆಣ್ಣಾನೆ ಕುದುರೆ ದಾರಿ ಎಂಬಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟಿದೆ. ತನ್ನ ತಾಯಿ ಸಾವಿನಿಂದ ವಿಚಲಿತಗೊಂಡ ಮರಿಯು ಒಂದೆರಡು ದಿನ ಕಾಡಿನಲ್ಲೇ ಕಾಲ ಕಳೆದಿದ್ದು ಕನಕಪುರ ತಾಲೂಕಿನ ಸೋಲಿಗೆರೆ, ಪೋಡನಗುಂದಿ ಭಾಗಸ್ಥರು ಕಾಡಿಗೆ ಮೇಯಲು ಬಿಟ್ಟಿದ್ದ ದನಗಳ ಜೊತೆ ಮರಿ ಆನೆಯೂ ಇರುವುದನ್ನು ಗಮನಿಸಿದ್ದಾರೆ.
ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮರಿ ಆನೆಯನ್ನು ರಕ್ಷಣೆ ಮಾಡಿ ಬೇರೆ ಆನೆಗಳ ಗುಂಪಿನ ಜೊತೆ ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇತರೆ ಆನೆಗಳು ಈ ಮರಿಯನ್ನು ಜೊತೆಗೆ ಸೇರಿಸಿಕೊಂಡಿಲ್ಲ. ಆದ್ದರಿಂದ ಇದನ್ನು ಸಾತನೂರು ಬಳಿಯ ಭೂಹಳ್ಳಿ ಅರಣ್ಯ ಕ್ಯಾಂಪ್‌ನಲ್ಲಿ ಭೂಹಳ್ಳಿ ಪಶು ವೈದ್ಯಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಪಾಲನೆ ಮಾಡಲಾಗುತ್ತಿದೆ.
ಆನೆ ಮರಿ ಹಸುವಿನ ಹಾಲು ಕುಡಿದು ಆರೋಗ್ಯವಾಗಿದೆ. ಡಿಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಇನ್ನೊಂದು ವಾರದಲ್ಲಿ ಮುತ್ತತ್ತಿ ಬಳಿಯ ಭೀಮೇಶ್ವರಿ ಅರಣ್ಯ ಕ್ಯಾಂಪಿಗೆ ಬಿಡುತ್ತೇವೆ ಎಂದು ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯಾಧಿಕಾರಿ ದೇವರಾಜು ಮಾಹಿತಿ ನೀಡಿದ್ದಾರೆ.
ಆನೆ ಮರಿಗೆ ಆರೈಕೆ:
ಕನಕಪುರ ತಾಲೂಕು ಭೂಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡ ಒಂದೂವರೆ ತಿಂಗಳ ಆನೆ ಮರಿಯನ್ನು ಹಲಗೂರಿನ ಭೀಮೇಶ್ವರಿ ಕ್ಯಾಂಪ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ. ತಾಯಿ ಆನೆಯಿಂದ ಬೇರ್ಪಟ್ಟಮರಿ ಆನೆ ದನಗಳ ಜೊತೆ ಗ್ರಾಮಕ್ಕೆ ಆಗಮಿಸಿದೆ. ಇದನ್ನು ಗಮನಿಸಿದ ಭೂಹಳ್ಳಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಅಧಿಕಾರಿಗಳು ಕೂಡ ಮತ್ತೆ ತಾಯಿ ಆನೆ ಜೊತೆ ಸೇರಿಸಲು ಮುಂದಾಗಿದ್ದರೂ ಸಹ ಕಾಡಿನಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ಅಥವಾ ತಾಯಿ ಆನೆ ಸಾವನ್ನಪ್ಪಿರುವ ಶಂಕೆ ಹಿನ್ನೆಲೆಯಲ್ಲಿ ಮರಿ ಆನೆಯನ್ನು ಮುತ್ತತ್ತಿ ಬಳಿ ಇರುವ ಭೀಮೇಶ್ವರಿ ಕ್ಯಾಂಪ್‌ಗೆ ನಿನ್ನೆ ಸಂಜೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.