ಕಂದಕಕ್ಕೆ ಉರುಳಿದ ಓಮ್ನಿ

ಬಂಟ್ವಾಳ, ಮಾ.೨೬- ಪಾರ್ಕಿಂಗ್ ಮಾಡಿದ್ದ ಪತ್ರಿಕೆ ಸಾಗಾಟದ ಮಾರುತಿ ಓಮ್ನಿ ಕಾರೊಂದು ಸ್ವಯಂ ಚಲಿಸಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಗುರುವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಮಂಗಳೂರಿನಿಂದ ಸುಳ್ಯ ಕಡೆ ಸಂಚರಿಸುತ್ತಿದ್ದ ಕಾರಿನ ಚಾಲಕ ಟೋಲ್ ಗೇಟ್ ಬಳಿ ಪಾರ್ಕಿಂಗ್ ಮಾಡಿ ನೀರು ಖರೀದಿಸಲೆಂದು ಅಂಗಡಿಗೆ ತೆರಳಿದ್ದು, ಈ ವೇಳೆ ಕಾರು ಸ್ವಯಂ ಚಲಿಸಿ ಉರುಳಿ ಬಿದ್ದಿದೆ. ಕಾರನ್ನು ನಿಟ್ರೋಲ್ ಗೇರ್ ನಲ್ಲಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಅವಘಡ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಬೆಳಗ್ಗೆ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆ ಎತ್ತಲಾಗಿದೆ.