ಬೆಂಗಳೂರು,ಜೂ,೯:ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜೂ. ೧೧ ರಂದು ಚಾಲನೆ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು ಕೆಲಹೊತ್ತು ಬಿಎಂಟಿಸಿಯ ನಿರ್ವಾಹಕನ ಪಾತ್ರ ನಿರ್ವಹಿಸಲಿದ್ದಾರೆ.ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಎಂಟಿಸಿ ಬಸ್‌ನ ನಿರ್ವಾಹಕರಾಗಿ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಟಿಕೆಟ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ.ಜೂ. ೧೧ ಭಾನುವಾರ ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ಬಿಎಂಟಿಸಿ ಬಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ಬಸ್ ಟಿಕೆಟ್ ನೀಡಿ ಬಸ್‌ನಲ್ಲೇ ವಿಧಾನಸೌಧಕ್ಕೆ ಆಗಮಿಸುವರು.ಇದಾದ ನಂತರ ವಿಧಾನಸೌಧದದ ಮುಂಭಾಗದಲ್ಲಿ ನಡೆಯುವ ಶಕ್ತಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅದೇ ದಿನ ಎಲ್ಲ ಜಿಲ್ಲೆಗಳಲ್ಲೂ ಸಚಿವರುಗಳು ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಜೂ. ೧೧ ರಿಂದ ಮಹಿಳಾ ಪ್ರಯಾಣಿಕರು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳಲ್ಲಿ ಪ್ರಯಾಣಿಸಬಹುದು. ಇನ್ನೂ ೩ ತಿಂಗಳಲ್ಲಿ ಎಲ್ಲ ಮಹಿಳೆಯರಿಗೂ ಅಧಿಕೃತ ಗುರುತಿನ ಚೀಟಿಯನ್ನು ಸಾರಿಗೆ ಸಂಸ್ಥೆ ವಿತರಿಸಲಿದೆ.