ಕಂಠೀರವ ಕ್ರೀಡಾಂಗಣಕ್ಕೆ ಹರಿದು ಬಂದ ಜನಸಾಗರ

ಬೆಂಗಳೂರು, ಮೇ.೨೦- ರಾಜ್ಯದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದಿದೆ. ನೂತನ ಸರ್ಕಾರ ರಚನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಕಂಠೀರವ ಕ್ರೀಡಾಂಗಣದಲ್ಲಿ ಹರಿದು ಬಂದಿತ್ತು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗೂ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಭೂತಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಬೆಳಿಗ್ಗೆಯಿಂದಲೇ ಸಾಗರೋಪಾದಿಯಲ್ಲಿ ಜನರು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಜನರು ಕಂಠೀರವ ಕ್ರೀಡಾಂಗಣದಲ್ಲಿ ಆಸೀನರಾಗುವ ಮೂಲಕ ತಮ್ಮ ನೆಚ್ಚಿನ ನಾಯಕರಿಗೆ ಜೈಕಾರ ಕೂಗಿ ಹರ್ಷೋದ್ಗಾಗರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ರಾತ್ರಿಯೇ ಆಗಮಿಸಿದ್ದ ಅಭಿಮಾನಿಗಳು ತಡವಾಗಿ ಬಂದರೆ ಕುಳಿತುಕೊಳ್ಳುವ ಅವಕಾಶ ಸಿಗುವುದಿಲ್ಲ ಎನ್ನುವ ಆತಂಕದಿಂದ ಬೆಳಗ್ಗೆ ೬ ಗಂಟೆಯಿಂದಲೇ ಕ್ರೀಡಾಂಗಣದತ್ತ ಜನರು ಜಮಾಯಿಸಿದ ದೃಶ್ಯ ಕಂಡು ಬಂತು.
ಮುಗಿಲು ಮುಟ್ಟಿದ ಸಂಭ್ರಮ:
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು,, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಕಂಠೀರವ ಕ್ರೀಡಾಂಗಣದಲ್ಲಿ ಸೇರಿದ್ದ ಜನರ ಹರ್ಷೋದ್ಗಾರ ಖುಷಿಗೆ ಪಾರವೇ ಇಲ್ಲದಂತಾಗಿತ್ತು.
ಐತಿಹಾಸಿಕ ಸಮಾರಂಭ:
ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯ ಪದಗ್ರಹಣ ಸಮಾರಂಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ತುಂಬಿ ತುಳುಕುತ್ತಿದ್ದರು ಈ ಕಾರ್ಯಕ್ರಮ ಐತಿಹಾಸಿಕ ಸಮಾರಂಭ ವಾಗಿ ಬಿಂಬಿತವಾಗಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಕೂರಲು ನಿಲ್ಲಲು ಜಾಗವಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಕಟ್ಟಿರುವ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳಿಂದ ತುಂಬಿ ತುಳುಕಾಡುತ್ತಿತ್ತು.
ಜನರ ಧಾವಂತ:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಉಮೇದಿನಲ್ಲಿದ್ದ ಸಾವಿರಾರು ಜನರು ತಾವು ಮುಂಚೆ ಕ್ರೀಡಾಂಗಣದಲ್ಲಿ ಆಸೀನರಾಗಬೇಕು ಎನ್ನುವ ಧಾವಂತ ಕಂಡು ಬಂದಿತ್ತು.