ಕಂಟೈನರ್‌ಗೆ ಬಸ್ ಡಿಕ್ಕಿ: ೮ ಮಂದಿಗೆ ಗಾಯ

ಸಿರಾ, ಸೆ. ೫- ಖಾಸಗಿ ಬಸ್ಸೊಂದು ಮುಂದೆ ಹೋಗುತ್ತಿದ್ದ ಕಂಟೈನರ್ ವಾಹನವನ್ನು ಹಿಂದಿಕ್ಕಲು ಹೋಗಿ ಅದರ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ೮ ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ತಾವರೇಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಇಂದು ಬೆಳಗಿನ ಜಾವ ೪.೪೫ ರ ಸಮಯದಲ್ಲಿ ಸಿರಾ ಕಡೆಯಿಂದ ಹಿರಿಯೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ ತಾಲ್ಲೂಕಿನ ಉಜ್ಜನಕುಂಟೆ ಸಮೀಪ ರಾಷ್ತ್ರೀಯ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಕಂಟೈನರ್ ವಾಹನವನ್ನು ಹಿಂದಿಕ್ಕುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್‌ನಲ್ಲಿದ್ದವರ ಪೈಕಿ ಸುಮಾರು ೭-೮ ಮಂದಿಗೆ ಗಾಯಗಳಾಗಿದ್ದು, ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ತಾವರೆಕೆರೆ ಪೋಲಿಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.