ಕಂಕುಳ ದುರ್ವಾಸನೆ ತಡೆಯಲು ಸಲಹೆಗಳು

ಅಡುಗೆ ಸೋಡಾ:ಅತಿಯಾದ ಬೆವರುವಿಕೆ ಇದ್ದರೆ ಅಡುಗೆ ಸೋಡಾ ಬಳಸುವ ಮೂಲಕ ಬೆವರುವಿಕೆ ಮತ್ತು ದುರ್ವಾಸನೆಯನ್ನು ತಡೆಯಬಹುದು. ಇದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಈ ವಾಸನೆಗೆ ಕಾರಣವಾಗಿದ್ದ ಬ್ಯಾಕ್ಟೀರಿಯಾಗಳನ್ನು ತೊಲಗಿಸುವ ಮೂಲಕ ವಾಸನೆಯನ್ನೂ ಇಲ್ಲವಾಗಿಸುತ್ತವೆ.
ಅನುಸರಿಸುವ ವಿಧಾನ: ಸಮಪ್ರಮಾಣದಲ್ಲಿ ಕೊಂಚ ಅಡುಗೆ ಸೋಡಾ ಮತ್ತು ತಾಜಾ ಹಿಂಡಿ ತೆಗೆದ ಲಿಂಬೆರಸಗಳನ್ನು ಬೆರೆಸಿ ಲೇಪ ತಯಾರಿಸಿ. ಈ ಲೇಪವನ್ನು ಸ್ನಾನಕ್ಕೂ ಮುನ್ನ ಕಂಕುಳ ಭಾಗಕ್ಕೆ ನೇರವಾಗಿ ಅನ್ವಯಿಸಿ ಮತ್ತು ಸುಮಾರು ಎರಡರಿಂದ ಮೂರು ನಿಮಿಷ ಹಾಗೇ ಬಿಡಿ. ಬಳಿಕ ಎಂದಿನಂತೆ ಸ್ನಾನ ಮಾಡಿ.
ಲಿಂಬೆ ರಸ: ಲಿಂಬೆ ಆಮ್ಲೀಯವಾಗಿದ್ದು ಹೆಚ್ಚು ಪ್ರಬಲವೂ ಆಗಿದೆ ಹಾಗೂ ಈ ಆಮ್ಲದ ಪ್ರಾಬಲ್ಯ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಲ್ಲುದು. ಅಲ್ಲದೇ ಲಿಂಬೆರಸ ತ್ವಚೆಯ ಪಿಎಚ್ ಮಟ್ಟ ಅಥವಾ ಆಮ್ಲೀಯ-ಕ್ಷಾರೀಯ ಮಟ್ಟಗಳನ್ನು ತಗ್ಗಿಸಿ ಇಲ್ಲಿ ಬ್ಯಾಕ್ಟೀರಿಯಾಗಳು ಜೀವಸಹಿತ ಉಳಿಯದಂತೆ ಮಾಡುತ್ತವೆ.
ಅನುಸರಿಸುವ ವಿಧಾನ: ಒಂದು ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ಅರ್ಧ ಲಿಂಬೆಯ ಒಳಗಿರುವ ಬೀಜಗಳನ್ನು ನಿವಾರಿಸಿ ಇದನ್ನು ಕಂಕುಳ ಭಾಗಕ್ಕೆ ನೇರವಾಗಿ ಉಜ್ಜಿಕೊಳ್ಳಿ. ಉಜ್ಜುವಾಗ ಕೊಂಚವೇ ಒತ್ತಡದಿಂದ ಲಿಂಬೆಯನ್ನು ಹಿಸುಕಿ ರಸ ಜಿನುಗುವಂತೆ ಮಾಡಿ. ಬಳಿಕ ಕೈಗಳನ್ನು ಮೇಲೆತ್ತಿ ಇರಿಸಿ ರಸ ಒಣಗುವಂತೆ ಮಾಡಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮ ಸಂವೇದಿಯಾಗಿದ್ದರೆ ಅರ್ಧ ಲಿಂಬೆಯ ರಸವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಹತ್ತಿಯುಂಡೆಯಲ್ಲಿ ಅದ್ದಿ ಕಂಕುಳ ಭಾಗಕ್ಕೆ ಒರೆಸಿಕೊಳ್ಳಿ.
ಕೊಬ್ಬರಿ ಎಣ್ಣೆ: ತ್ವಚೆ ಮತ್ತು ಕೂದಲಿಗೆ ಕೊಬ್ಬರಿ ಎಣ್ಣೆಗಿಂತ ಉತ್ತಮ ತೈಲ ಇನ್ನೊಂದಿಲ್ಲ. ಇದರಲ್ಲಿರುವ ಮಧ್ಯಮ-ಸಂಕಲೆಯ ಕೊಬ್ಬಿನ ಆಮ್ಲಗಳು ಪ್ರಬಲ ಅತಿಸೂಕ್ಷ್ಮಜೀವಿ ನಿವಾರಕಗಳೂ ಆಗಿವೆ. ಈ ಎಣ್ಣೆಯ ವಾತಾವರಣದಲ್ಲಿ ವಾಸನೆ ಬರಿಸುವ ಬ್ಯಾಕ್ಟೀರಿಯಾಗಳು ಬದುಕಲಾರವು. ಅಲ್ಲದೇ ತ್ವಚೆಯ ಪಿಎಚ್ ಸಮತೋಲನವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅನುಸರಿಸುವ ವಿಧಾನ: ಕೊಂಚ ಕೊಬ್ಬರಿ ಎಣ್ಣೆಯನ್ನು ಬೆರಳ ತುದಿಗಳಿಗೆ ಸವರಿ ನೇರವಾಗಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಎಣ್ಣೆಯನ್ನು ತ್ವಚೆ ಹೀರಿಕೊಳ್ಳುವರೆಗೂ ಕೊಂಚ ಹೊತ್ತು ಕೈಗಳನ್ನು ಎತ್ತಿ ಇರಿಸಿ ಒಣಗಲು ಬಿಡಿ.
ಎಷ್ಟು ಬಾರಿ ಹಚ್ಚಿಕೊಳ್ಳಬೇಕು? ದಿನಕ್ಕೆ ಎರಡು ಬಾರಿ ಹಚ್ಚಿಕೊಂಡರೆ ಬೇಕಾದಷ್ಟಾಯಿತು. ಉತ್ತಮ ಪರಿಣಾಮಕ್ಕಾಗಿ ಸ್ನಾನದ ಬಳಿಕ ಮೈ ಒರೆಸಿಕೊಂಡು ಹಚ್ಚಿಕೊಳ್ಳಿ.
ಹರಳೆಣ್ಣೆ: ಹಿಂದಿನ ದಿನಗಳಲ್ಲಿ ಅತಿ ಹೆಚ್ಚಾಗಿ ಹಲವಾರು ಕೆಲಸಗಳಿಗೆ ಬಳಕೆಯಾಗುತ್ತಿದ್ದ ಹರಳೆಣ್ಣೆ ಈಗ ವಿರಳವಾಗಿದೆ. ಅತಿ ಸ್ನಿಗ್ಧತೆಯ ಕಾರಣ ಇದರ ಪಸೆ ಹಚ್ಚಿದಲ್ಲಿ ಉಳಿದುಕೊಂಡು ಇಲ್ಲಿ ಸಂಗ್ರಹವಾಗುವ ಧೂಳು ಕ್ರಮೇಣ ಗಟ್ಟಿಯಾದ ಅಟ್ಟೆಯಾಗುವುದು ಈ ಎಣ್ಣೆಯ ಬಳಕೆ ಕಡಿಮೆಯಾಗಲು ಒಂದು ಕಾರಣ. ಅಂದ ಮಾತ್ರಕ್ಕೆ ಇದರ ಗುಣಗಳೇನೂ ಕಡಿಮೆಯಾಗಿಲ್ಲ. ಈ ಎಣ್ಣೆ ಹಚ್ಚಿಕೊಂಡಾಗಲೂ ದುರ್ಗಂಧ ಮೂಡಿಸುತ್ತಿದ್ದ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತದೆ. ಇದರಲ್ಲಿರುವ ಅತಿಸೂಕ್ಷ್ಮಜೀವಿ ನಿವಾರಕ ಗುಣ ಇದಕ್ಕೆ ಕಾರಣ.
ಅನುಸರಿಸುವ ವಿಧಾನ: ಕೊಂಚ ಹರಳೆಣ್ಣೆಯನ್ನು ಬೆರಳ ತುದಿಗಳ ಮೂಲಕ ಕಂಕುಳ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ. ಮರುದಿನ ಎಂದಿನಂತೆ ಸ್ನಾನ ಮಾಡಿ.
ಆಲೂಗಡ್ಡೆ: ಆಲುಗಡ್ಡೆ ಕೊಂಚ ಆಮ್ಲೀಯವಾಗಿದ್ದು ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ತ್ವಚೆಯ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಈ ಮೂಲಕ ಕಂಕುಳ ಭಾಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ದುರ್ಗಂಧವನ್ನೂ ಇಲ್ಲವಾಗಿಸುತ್ತದೆ.
ಅನುಸರಿಸುವ ವಿಧಾನ: ಒಂದು ಆಲುಗಡ್ಡೆಯನ್ನು ಸುಲಿದು ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿ, ಒಂದು ಬಿಲ್ಲೆಯನ್ನು ನೇರವಾಗಿ ಕಂಕುಳ ಭಾಗಕ್ಕೆ ಹಚ್ಚಿ ರಸ ಒಸರುವಂತೆ ಮಾಡಿ. ಹೆಚ್ಚು ರಸಕ್ಕಾಗಿ ಹೆಚ್ಚು ಬಿಲ್ಲೆಗಳನ್ನು ಬಳಸಿ.
ಈ ರಸ ಒಣಗುವವರೆಗೂ ಕೈಗಳನ್ನು ಮೇಲೆತ್ತಿ ಇರಿಸಿ. ಬಳಿಕ ನಿಮ್ಮ ನಿತ್ಯದ ಡಿಯೋಡೋರೆಂಟ್ ಸಿಂಪಡಿಸಿ.