ಔಷಧ ವ್ಯಾಪಾರಿಗಳ ಹಿತ ರಕ್ಷಣೆಗೆ ಸಂಘ ಸಿದ್ಧ

ಬೀದರ್: ಫೆ.28:ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘವು ಔಷಧ ವ್ಯಾಪಾರಿಗಳ ಹಿತ ರಕ್ಷಣೆಗೆ ಸಿದ್ಧವಿದೆ ಎಂದು ಸಂಘದ ಜಂಟಿ ಸಂಘಟನಾ ಕಾರ್ಯದರ್ಶಿ ಎ.ಕೆ. ಜೀವನ್ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಟ್ಟಡದ ಮೊದಲ ಮಹಡಿ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಪಾರಿಗಳ ಏನೇ ಸಮಸ್ಯೆಗಳಿದ್ದರೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಘಗಳ ಗಮನಕ್ಕೆ ತರಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಹಾಗೂ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಪ್ರಬಲ ಸಂಘಗಳಾಗಿವೆ. ರಾಜ್ಯ ಸಂಘಕ್ಕೆ 26 ಸಾವಿರ ಸದಸ್ಯರಿದ್ದರೆ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಕ್ಕೆ 13 ಲಕ್ಷ ಸದಸ್ಯರು ಇದ್ದಾರೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಔಷಧಕ್ಕೆ ಸಂಬಂಧಿಸಿದ ಕಾಯ್ದೆಗಳಲ್ಲಿ ಬದಲಾವಣೆಗಳು ಆಗಲಿವೆ. ವ್ಯಾಪಾರಿಗಳು ಸರ್ಕಾರದ ನಿಮಯಾನುಸಾರ ವ್ಯಾಪಾರ ನಡೆಸಬೇಕು. ಆಧುನಿಕ ತಂತ್ರಜ್ಞಾನದೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ ಮಾತನಾಡಿ, ಕೆಲ ಚೈನ್ ಅಂಗಡಿಗಳು ಗ್ರಾಹಕರಿಗೆ ಶೇ 80 ರಷ್ಟು ರಿಯಾಯಿತಿ ಕೊಡುವುದಾಗಿ ಹೇಳುತ್ತಿವೆ. ಆದರೆ, ವಾಸ್ತವದಲ್ಲಿ ಆಯ್ದ ಉತ್ಪನ್ನಗಳಿಗೆ ಮಾತ್ರ ಕೊಡುತ್ತಿವೆ. ಬರುವ ದಿನಗಳಲ್ಲಿ ಸಂಘವೇ ಔಷಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಅಂಥ ಅಂಗಡಿಗಳಿಗೆ ಸ್ಪರ್ಧೆ ಒಡ್ಡುವ ಕುರಿತು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಸಂಘದ ರಾಜ್ಯ ಸಹ ಕಾರ್ಯದರ್ಶಿ ಜಿ.ಎನ್. ಭಾನುಪ್ರಕಾಶ, ಸಂಘಟನಾ ಕಾರ್ಯದರ್ಶಿ ಬಂಧು ಆರ್. ಕಟ್ಟಿ, ಅಧ್ಯಕ್ಷತೆ ವಹಿಸಿದ್ದ ಬೀದರ್ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ, ಕಲಬುರಗಿ ವೃತ್ತದ ಉಪ ಔಷಧ ನಿಯಂತ್ರಕ ಗೋಪಾಲ್ ಎಚ್. ಭಂಡಾರಿ, ಬೀದರ್ ಸಹಾಯಕ ಔಷಧ ನಿಯಂತ್ರಕಿ ಕರುಣಾದೇವಿ ಮಾತನಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ಬೀದರ್ ಕೆಮಿಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಲ್ಲಪ್ಪ ಬಿರಾದಾರ, ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಭುರಳಿ, ಕಲಬುರಗಿ ಜಿಲ್ಲಾ ಘಟಕದ ಕಾರ್ಯದರ್ಶಿ ರವೀಂದ್ರ ಜೋಶಿ, ಬೀದರ್ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ವಿಜಯಕುಮಾರ ಬಿರಾದಾರ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖಾಲೇದ್, ಸಂಘಟನಾ ಕಾರ್ಯದರ್ಶಿ ಬಸವರಾಜ ಪಾಟೀಲ ಹಾರೂರಗೇರಿ, ಖಜಾಂಚಿ ಸಂಜು ನೂಕಲವಾರ್, ದೂರು ವಿಭಾಗದ ಅಧ್ಯಕ್ಷ ಎತೆಶಾಮ್ ಉಲ್ ಹಕ್, ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಔಷಧ ವ್ಯಾಪಾರಿಗಳು ಪಾಲ್ಗೊಂಡಿದ್ದರು.