ಔಷಧ ವ್ಯಾಪಾರಿಗಳ ಸಂಘದ ಮಾಲೀಕರಿಂದ ಸ್ವಯಂಪ್ರೇರಿತ ಬಂದ್ ಗೆ ಬೆಂಬಲ: ಆಲೇಗಾಂವ

ಅಫಜಲಪುರ: ಮಾ.19:ತಾಲೂಕಿನ ಭೀಮಾ ನದಿ ಬತ್ತಿ ಬರಡಾಗಿದೆ. ರೈತರು ಹಾಗೂ ಜನ ಜಾನುವಾರಗಳು ಸಂಕಷ್ಟ ಎದುರಿಸುವ ಭೀತಿ ಉಂಟಾಗಿದೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಔಷಧ ವ್ಯಾಪಾರಿಗಳ ಸಂಘದ ತಾಲೂಕಾ ಕಾರ್ಯದರ್ಶಿ ಮಹೇಶ ಆಲೇಗಾಂವ ತಿಳಿಸಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯುವ ಮುಖಂಡ ಶಿವಕುಮಾರ್ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಅಫಜಲಪುರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರೈತರು ಹಾಗೂ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ನಮ್ಮ ಹಕ್ಕಿನ ನೀರು ನಮಗೆ ಹರಿಸಲು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾಗಿ ನಾಳೆ ಬುಧವಾರ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಔಷಧ ವ್ಯಾಪಾರಿಗಳ ಸಂಘದ ಎಲ್ಲಾ ಮಾಲೀಕರು ತಾವು ಕೂಡ ಸ್ವಯಂ ಪ್ರೇರಿತ ಬಂದ್ ಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು. ಹೀಗಾಗಿ ಈ ಒಂದು ಸ್ವಯಂಪ್ರೇರಿತ ಅಘೋಷಿತ ಬಂದ್ ಗೆ ಗ್ರಾಮೀಣ ಭಾಗದ ಸಾರ್ವಜನಿಕರು, ರೈತರು ಹಾಗೂ ಪಟ್ಟಣದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟದ ಯಶಸ್ಸಿಗೆ ಸಹಕರಿಸೋಣ ಎಂದು ಕರೆ ನೀಡಿದರು.

ಈ ವೇಳೆ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕಮಲಾಕರ ಶೆಟ್ಟಿ, ಸಿದ್ದಾರಾಮ ಮನ್ಮಿ, ರಾಘವೇಂದ್ರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ, ತೋಸಿಫ್ ಪಟೇಲ್, ಧನರಾಜ ಕೆಂಗನಾಳ ಅನೇಕರಿದ್ದರು.