ಔಷಧೀಯ ಕೋರ್ಸ್‌ಗಳಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು, ಮಾ.೫- ಔಷಧೀಯ ಕ್ಷೇತ್ರದಲ್ಲಿನ ಕೋರ್ಸ್‌ಗಳನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಮಹೇಂದ್ರ ಅವರು ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಅತ್ಯಂತ ಗೌರವಾನ್ವಿತ ಮತ್ತು ಬೇಡಿಕೆಯಲ್ಲಿರುವ ವೃತ್ತಿಗಳಲ್ಲಿ ಒಂದಾಗಿರುವ ಅತ್ಯಂತ ಬೇಡಿಕೆಯ ಔಷಧೀಯ ಕ್ಷೇತ್ರದಲ್ಲಿ ಕಲಿಯಲು ಹೆಚ್ಚಿನ ವಿದ್ಯಾರ್ಥಿಗಳು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಯಲಹಂಕದ ಆದಿತ್ಯ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ ಎಜುಕೇಶನ್ & ರಿಸರ್ಚ್ ನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಫಾರ್ಮಸಿ ಪದವಿ ಕೋರ್ಸ್ ಗೆ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಫಾರ್ಮಸಿಯನ್ನು ಅಧ್ಯಯನದ ಕೋರ್ಸ್ ಆಗಿ ಆಯ್ಕೆ ಮಾಡುವ ಸರಿಯಾದ ನಿರ್ಧಾರವನ್ನು ತೆಗೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಯಶಸ್ವಿಯಾಗುವವರೆಗೆ ವಿದ್ಯಾರ್ಥಿಗಳು ಸತತ ಪ್ರಯತ್ನ ನಡೆಸಬೇಕು ವಿಫಲವಾದರೂ ಎಂದಿಗೂ ಪ್ರಯತ್ನ ಬಿಡಬಾರದು, ವೈದ್ಯಕೀಯ ಕ್ಷೇತ್ರದಲ್ಲಿ ಸತತ ಪ್ರಯತ್ನ,ಶ್ರಮ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿತ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎ.ವಿಶ್ವನಾಥ್, ಉಪಾಧ್ಯಕ್ಷೆ ಡಾ.ಪ್ರಿಯಾ ವಿಶ್ವನಾಥ್, ನಿರ್ದೇಶಕಿ ಡಾ.ಶೋಭಾ ರಾಣಿ, ಉಪ ಪ್ರಾಂಶುಪಾಲೆ ಡಾ.ಸುಚಿತ್ರಾ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.