ಔಷಧಿ, ವೈದ್ಯರ ಕೊರತೆ : ಸರ್ಕಾರದ ವೈಫಲ್ಯ – ಖಂಡನೆ

ಕೊರೊನಾ ಮಹಾಮಾರಿ : ಉಸ್ತುವಾರಿ ಸಚಿವರು ಇದ್ದಾರೋ? – ಇಲ್ಲವೋ?
ರಾಯಚೂರು.ಏ.೨೯- ಕೊರೊನಾ ಮಹಾಮಾರಿ ನಿರ್ವಹಣೆಗೆ ಅತ್ಯಗತ್ಯ ಔಷಧಿ, ಆಕ್ಸಿಜನ್, ವೈದ್ಯರು, ನರ್ಸ್ ಮತ್ತು ಆಸ್ಪತ್ರೆಯ ಹಾಸಿಗೆ ಒದಗಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲಗೊಂಡ ಪರಿಣಾಮ ಜಿಲ್ಲೆಯಲ್ಲಿ ಸಾವು, ನೋವು ತೀವ್ರಗೊಳ್ಳಲು ಕಾರಣವಾಗಿದೆಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು, ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೊರೊನಾ ಮಹಾಮಾರಿ ವ್ಯಾಪಾಕವಾಗಿ ವಿಸ್ತರಿಸಿದೆ. ಜಿಲ್ಲೆಯಲ್ಲಿ ಕೊರೊನಾ ಮಾದರಿ ತಪಾಸಣೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದರಿಂದ ಕೊರೊನಾ ಹರಡುವಿಕೆಯ ತಡೆಯಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿದ ಅವರು, ಪ್ರತಿನಿತ್ಯ ೫೦೦ ರಿಂದ ೭೦೦ ಸಂಖ್ಯೆ ಸೋಂಕಿತರ ಪತ್ತೆಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತುಂಬಿ ಸಮರ್ಪಕ ಚಿಕಿತ್ಸೆ ನೀಡಲು ಅಗತ್ಯವಾದ ವೈದ್ಯರು, ಔಷಧೋಪಚಾರವಿಲ್ಲದೇ, ಜನ ಸಾಯುತ್ತಿದ್ದರೂ, ಸರ್ಕಾರ ಯಾವುದೇ ಪೂರಕ ಸ್ಪಂದನೆಯಿಲ್ಲದೇ, ಕೈಚಲ್ಲಿ ಕುಳಿತಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯೇ? ಸತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇದ್ದಾರೆಯೇ? ಅಥವಾ ಸತ್ತಿದ್ದಾರೆಯೇ ಎಂದು ಕಾರಾವಾಗಿ ಪ್ರಶ್ನಿಸುತ್ತಾ, ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಡೆಸಿ, ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರಿಗೆ ತಮ್ಮ ಉಸ್ತುವಾರಿ ಜಿಲ್ಲೆಗೆ ಭೇಟಿಯೂ ನೀಡದೇ, ಇಲ್ಲಿಯವರು ಜನರೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯವಾಗಿದೆ. ಬೆಳಗಾವಿಯಲ್ಲಿ ಇದ್ದವರು ಮಾತ್ರ ಜನರೇ?. ಸ್ವತಃ ಮುಖ್ಯಮಂತ್ರಿ ಆಯಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಭೆ ನಿರ್ವಹಿಸುವಂತೆ ಸ್ಪಷ್ಟವಾಗಿ ಸೂಚನೆ ನೀಡಿದ್ದರೂ, ಉಸ್ತುವಾರಿ ಸಚಿವರು ಮಾತ್ರ ಜಿಲ್ಲೆಗೆ ಇಲ್ಲಿವರೆಗೂ ಭೇಟಿ ನೀಡದಿರುವುದು ಖಂಡನೀಯವಾಗಿದೆ.
ಕೊರೊನಾ ಮಹಾಮಾರಿಯಿಂದ ಪರಿಸ್ಥಿತಿ ಅತ್ಯಂತ ದಾರುಣಕ್ಕೆ ತಿರುಗಿದೆ. ಓಪೆಕ್ ಆಸ್ಪತ್ರೆಯಲ್ಲಿ ೭ ಜನ ವೈದ್ಯರು ಪಿಪಿಇ ಕಿಟ್ ಧರಿಸಿ, ೧೫೦ ಸೋಂಕಿತರನ್ನು ನೋಡಬೇಕಾದಂತಹ ದಾರುಣ ಸ್ಥಿತಿ ಇದೆ. ರೋಗಿಗಳ ಅನುಪಾತಕ್ಕನುಗುಣವಾಗಿ ವೈದ್ಯರು ಮತ್ತು ನರ್ಸ್‌ಗಳು ಇಲ್ಲದಿರುವುದು ಆರೋಗ್ಯ ಸೇವಕರು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರನ್ನು ಭರ್ತಿ ಮಾಡಿಕೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸೇವಕರ ಕೊರತೆ, ರೋಗಿಗಳ ಪಾಲಿಗೆ ಭಾರೀ ಸಮಸ್ಯೆಯಾಗಿದೆ.
ಓಪೆಕ್ ಆಸ್ಪತ್ರೆ ಒಟ್ಟು ೨೭೦, ರಿಮ್ಸ್ ಆಸ್ಪತ್ರೆಯಲ್ಲಿ ೧೫೦ ಸೋಂಕಿತರಿದ್ದಾರೆ. ರೆಮ್‌ಡಿಸಿವಿರ್ ಔಷಧಿ ಕೊರತೆ ಜನರ ಸಾವಿನ ಸೂತಕಕ್ಕೆ ದಾರಿ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ೧.೨೫ ಲಕ್ಷ ರೆಮ್‌ಡಿಸಿವಿರ್ ಔಷಧಿ ಪೂರೈಸಿರುವುದಾಗಿ ಹೇಳುತ್ತಾರೆ. ಆದರೆ, ಜಿಲ್ಲೆಗೆ ಮಾತ್ರ ಭಿಕ್ಷೆಯ ರೀತಿಯಲ್ಲಿ ೧೦೦, ೨೦೦, ೪೦೦ ಮಾತ್ರ ವಿತರಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ತಮ್ಮದೇಯಾದ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಆದರೆ, ಆಕ್ಸಿಜನ್ ಮತ್ತು ಔಷಧಿ ಪೂರೈಕೆ ಗಂಭೀರ ಪರಿಣಾಮ ಎದುರಿಸಲು ಕಾರಣವಾಗಿದೆ.
ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಗೆ ಸಂಬಂಧಿಸಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಜನರ ಜವಾಬ್ದಾರಿಗೆ ಬಿಟ್ಟು, ಕೈ ತೊಳೆದುಕೊಂಡಿದೆ. ಕೊರೊನಾ ನಿರ್ವಹಣೆಗೆ ಸಂಬಂಧಿಸಿ ಸರ್ಕಾರದ ಉಸ್ತುವಾರಿ ಯಾರು? ಇಲ್ಲಿಯ ಜನಪ್ರತಿನಿಧಿಗಳ ಕಾಳಜಿಯೇನು? ಎಂದು ಪ್ರಶ್ನಿಸಿದ ಅವರು, ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲಗೊಂಡ ಪರಿಣಾಮ ಜನರ ಸಾವು, ನೋವು ಹೆಚ್ಚುವುದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಎಷ್ಟು ಜನ ಕೊರೊನಾಕ್ಕೆ ಬಲಿಯಾಗುತ್ತಾರೆ ಎನ್ನುವ ಮಾಹಿತಿಯೂ ನೀಡದೇ ಮುಚ್ಚಿಡಲಾಗುತ್ತಿದೆ. ಇಂದು ಕೆಲ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೇ, ಹಾಸಿಗೆಗಳಿಲ್ಲವೆಂದು ಹೇಳಲಾಗುತ್ತಿದೆ. ರೆಮ್‌ಡಿಸಿವಿರ್ ಬಗ್ಗೆ ಕೇಳಿದರೇ, ಸಂಗ್ರಹವಿಲ್ಲವೆಂದು ಹೇಳುವಂತಹ ದಾರುಣ ಸ್ಥಿತಿ ಜಿಲ್ಲೆಯಲ್ಲಿದ್ದು, ಇನ್ನಾದರೂ ಸರ್ಕಾರ ಇತ್ತ ಕಣ್ಮು ತೆರೆದು ನೋಡಲಿ ಎಂದು ಆಗ್ರಹಿಸಿದ್ದಾರೆ.
ಮೇ.೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಘೋಷಿಸಲಾಗಿದೆ. ಆದರೆ, ಎಲ್ಲರಿಗೂ ಲಸಿಕೆ ನೀಡಲು ಅಗತ್ಯವಾದ ಸಂಗ್ರಹವಿದೆಯೇ? ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕೊರೊನಾ ಮಹಾಮಾರಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ಈ ದಿವ್ಯ ನಿರ್ಲಕ್ಷ್ಯೆ ಜನರು ಭಾರೀ ಸಂಖ್ಯೆಯಲ್ಲಿ ಬಲಿಯಾಗುವುದ್ಕಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಂಭವಿಸುವ ಎಲ್ಲಾ ಸಾವು, ನೋವಿಗೂ ನೇರವಾಗಿ ರಾಜ್ಯ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ. ಇಂತಹ ನಿರ್ಲಕ್ಷ್ಯ ಮತ್ತು ನಿರ್ಲಜ್ಯ ಸರ್ಕಾರದ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ.
ಕೊರೊನಾ ಮಹಾಮಾರಿ ಇನ್ನೇಷ್ಟು ದಿನ ಹೀಗೆ ಮುಂದುವರೆಯುತ್ತದೆ ಎನ್ನುವ ಮಾಹಿತಿಯಿಲ್ಲ. ಮುಂಬರುವ ದಿನಗಳಲ್ಲಿ ಯಾವ ಆಪತ್ತಿನ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕ ಜನರನ್ನು ತೀವ್ರವಾಗಿ ಕಾಡುತ್ತಿದೆ. ಜನರಿಗೆ ಧೈರ್ಯ ತುಂಬಬೇಕಾದ ಸರ್ಕಾರ, ಕೇವಲ ಯಾವುದೇ ಕ್ರಮ ಕೈಗೊಳ್ಳದೇ ವಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಜನ ತಮ್ಮ ಸುರಕ್ಷತೆಗಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಮೂಲಕ ಜಾಗೃತಿರಾಗಿರುವಂತೆ ಮನವಿ ಮಾಡಿದ್ದಾರೆ.
ನಿನ್ನೆ ರಿಮ್ಸ್ ಆಸ್ಪತ್ರೆಯ ಡೀನ್ ಡಾ.ಬಸವರಾಜ ಪೀರಾಪೂರು ಅವರೊಂದಿಗೆ ಕೊರೊನಾ ನಿರ್ವಹಣೆಗೆ ಸಂಬಂಧಿಸಿ ಚರ್ಚಿಸಲಾಯತು. ಈ ಸಂದರ್ಭದಲ್ಲಿ ಜಿಂದಪ್ಪ, ನರಸಿಂಹಲು ಮಾಡಗಿರಿ, ತಿಮ್ಮಾರೆಡ್ಡಿ, ಅಸ್ಲಾಂ ಪಾಷಾ, ಮಹ್ಮದ್ ಶಾಲಂ ಉಪಸ್ಥಿತರಿದ್ದರು.