ಔಷಧಾಲಯದಲ್ಲಿ ಅಕ್ರಮ ಡ್ರಗ್ಸ್ ಮಾರಾಟ ಅಪರಾಧ

ಕೋಲಾರ,ಅ,೧೮- ಔಷಧಅಂಗಡಿ ಮಾಲೀಕರು ಜನರ ಸೇವೆಗಾಗಿ ಇದ್ದು ದುಡ್ಡಿಗಾಗಿ ಅಕ್ರಮ ಡ್ರಗ್ಸ್ ಮಾರುವ ಕೆಟ್ಟ ಪ್ರವೃತ್ತಿಯಿಂದ ಕೆಟ್ಟ ಹೆಸರು ತಂದುಕೊಳ್ಳಬೇಡಿ ಎಂದು ರಾಜ್ಯ ಡ್ರಗ್ಸ್ ನಿಯಂತ್ರಕ ಭಾಗೋಜಿ ಟಿ.ಖಾನಾಪುರೆ ಕಿವಿಮಾತು ಹೇಳಿದರು.
ನಗರದ ಹೊರವಲಯದ ಪ್ರಕೃತಿ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಹಾಗೂ ಕೋಲಾರ ಜಿಲ್ಲಾ ಕೆಮಿಸ್ಟ್ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ವತಿಯಿಂದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂದರ್ಭದಲ್ಲಿ ಔಷಧ ಮಾರಾಟಗಾರರನ್ನು ಕೊರೊನಾ ವಾರಿಯರ್ಸ್ ಎಂದು ಕರೆಯಲಾಗಿದೆ ನಿಮ್ಮ ಸೇವೆ ಅನನ್ಯವಾಗಿದ್ದು ಮುಂದಿನ ಪೀಳಿಗೆಯ ಜೊತೆಗೆ ಸಮಾಜದ ಹಿತದೃಷ್ಟಿಯಿಂದ ಡ್ರಗ್ಸ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಜೊತೆಗೆ ನಿಮಗೆ ಏನಾದರೂ ಮಾಹಿತಿ ಇದ್ದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವುದು ನಿಮ್ಮ ಮತ್ತು ಎಲ್ಲಾರ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ರಾಜ್ಯವು ಡ್ರಗ್ಸ್ ಮತ್ತು ಮಾದಕವಸ್ತುಗಳ ಬಗ್ಗೆ ಜಾಗೃತಿ ವಹಿಸಿದ್ದ ಪರಿಣಾಮವಾಗಿ ಕೇಂದ್ರ ಸರಕಾರವು ನಮ್ಮ ರಾಜ್ಯದ ಮಾರ್ಗದರ್ಶನ ಮತ್ತು ನೀತಿ ನಿಯಮಗಳನ್ನು ಕೇಳಿ ಜಾರಿ ಮಾಡುವ ಹಂತಕ್ಕೆ ಬಂದಿದ್ದೇವೆ. ಔಷಧೀಯ ಅಂಗಡಿಗಳ ಮಾಲೀಕರು ಮನಸ್ಸು ಮಾಡಿದರೆ ಇಡೀ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಿಸಬಹುದು ನಿಮ್ಮೊಂದಿಗೆ ಇಲಾಖೆಯ ಅಧಿಕಾರಿಗಳು ಅಬಕಾರಿಯ ಸಹಕಾರದಿಂದ ಸಲಹೆ ಸೂಚನೆಗಳನ್ನು ಪಡೆಯಲು ಮೂಲಕ ಮಾದರಿ ಜಿಲ್ಲೆಯನ್ನಾಗಿ ಮಾಡೋಣ ಎಂದರು.
ಕೋಲಾರ ಜಿಲ್ಲಾ ಕೆಮಿಸ್ಟ್ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಂಜನಿ ಸೋಮಣ್ಣ ಮಾತನಾಡಿ, ಔಷಧ ಮಾರಾಟಗಾರರು ಜನರಿಗೆ ನೀಡುತ್ತಾ ಬಂದಿರುವ ವಿಶ್ವಾಸಾರ್ಹ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಪ್ರತೀ ವರ್ಷ ಸೆ.೨೫ರಂದು ವಿಶ್ವ ಫಾರ್ಮಸಿಸ್ಟ್ ದಿನವನ್ನು ಆಚರಿಸಲಾಗುತ್ತದೆ. ಫಾರ್ಮಸಿಸ್ಟ್‌ಗಳು ವೈದ್ಯರ ನಿರ್ದೇಶನದಂತೆ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಎಲ್ಲಾ ಔಷಧಿಗಳನ್ನು ಲಭ್ಯವಾಗುವಂತೆ ಮಾಡಿ ರೋಗಿಗಳು ಗುಣಮುಖರಾಗಲು ಸಹಕಾರಿಯಾಗುತ್ತಾರೆ. ಔಷಧ ದುರ್ಬಳಕೆ ತಡೆಗಟ್ಟಲು, ಔಷಧ ಬಳಕೆಯ ಬಗ್ಗೆ ಅರಿವು ಮೂಡಿಸಲು ಫಾರ್ಮಸಿಸ್ಟ್ ದಿನ ಪೂರಕವಾಗಿರಲಿ ಎಂದು ಫಾರ್ಮಸಿಸ್ಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಡ್ರಗ್ಸ್ ನಿಯಂತ್ರಕ ಕೆಂಪಯ್ಯ ಸುರೇಶ್, ಜಿಲ್ಲಾ ಅಬಕಾರಿ ಆಯುಕ್ತ ರಮೇಶ್ ಕುಮಾರ್, ಜಿಲ್ಲಾ ಡ್ರಗ್ಸ್ ನಿಯಂತ್ರಣಾಧಿಕಾರಿ ಜೆ.ಶ್ಯಾಮಲಾ, ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರರೆಡ್ಡಿ, ಕಾರ್ಯದರ್ಶಿ ವಿ.ಕೃಷರೆಡ್ಡಿ, ಕೋಲಾರ ಜಿಲ್ಲಾ ಕೆಮಿಸ್ಟ್ ಕೇಮಾಭಿವೃದ್ಧಿ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಬಿಆರ್‌ಎಂ ಉಮೇಶ್, ರಾಜ್ಯ ಸಂಘದ ಜಿಲ್ಲಾ ಪ್ರತಿನಿಧಿ ಕೆ.ಎಂ. ಗಣೇಶ್, ರಾಮು, ಚಿನ್ನಪ್ಪ ನಾಯ್ಡು, ಬಾಲು, ಶಿವು, ರಂಗರಾಜು, ನಟರಾಜ್, ಮುನಿರಾಜು, ನಂದ ಕಿಶೋರ್, ಮಂಜುನಾಥ್, ಕೃಷ್ಣಮೂರ್ತಿ, ಪವನ್ ನಾರಾಯಣಸ್ವಾಮಿ,ಪ್ರಕೃತಿ ಕಾಲೇಜಿನ ಪ್ರಾಂಶುಪಾಲೆ ಶೃತಿ, ಜಿಲ್ಲೆಯ ಫಾರ್ಮಸಿಸ್ಟ್‌ಗಳು ಹಾಜರಿದ್ದರು.