ಔರಾದ : “ಡಾ.ಬಿ.ಆರ್.ಅಂಬೇಡ್ಕರ್” ಓದು ಕಾರ್ಯಕ್ರಮ

ಔರಾದ :ಸೆ.14: ಸಾಮಾಜಿಕ ಸಮಸ್ಯೆಗಳ ಮಧ್ಯೆಯೂ ಸಾಧನೆ ಮಾಡಿ ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಯುವಕರಿಗೆ ಮಾದರಿಯಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಸೂರ್ಯಕಾಂತ ಶಿಂಗೆ ತಿಳಿಸಿದರು.

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಾಲೂಕಿನ ವನಪಮಾರಪಳ್ಳಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜರುಗಿದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಭಾರತದ ಯುವ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರನ್ನು ಓದುವ ಅವಶ್ಯಕತೆಯಿದೆ, ಇತಿಹಾಸದ ಪುಟಗಳಲ್ಲಿ ಸೂರ್ಯನಂತೆ ಪ್ರಕಾಶಮಾನವಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಸಂಘರ್ಷವನ್ನು ಓದಿ ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಎಂದು ಹೇಳಿದರು.

ಯುವ ಚಿಂತಕ ನಂದಾದೀಪ ಬೋರಳೆ ವಿಶೇಷ ಉಪನ್ಯಾಸ ನೀಡಿ ಅವರು ಕಠಿಣ ಪರಿಶ್ರಮದಿಂದ ಉನ್ನತ ವ್ಯಾಸಂಗ ಮಾಡಿ ದೇಶದ ಎಲ್ಲ ಸಮುದಾಯಗಳಿಗೆ ಹಕ್ಕುಗಳನ್ನು ನೀಡುವಂಥ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದಾಗಿದೆ, ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ತಮ್ಮ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರವರನ್ನು ಓದಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಈ ಕೆಲಸ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು, ಪ್ರತಿಯೊಬ್ಬರು ಸಂವಿಧಾನ ಅರಿಯುವುದು ಅನಿವಾರ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶಕುಂತಲಾ ಬಿರಾದಾರ ಅಧ್ಯಕ್ಷತೆ ವಹಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ನಾಗಲಗಿದ್ದಿ, ರವಿ ಅಲ್ಮಾಜೆ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.