
(ಸಂಜೆವಾಣಿ ವಾರ್ತೆ)
ಔರಾದ:ಮಾ.19: ಏಕತಾ ಫೌಂಡೇಶನ್ ವತಿಯಿಂದ ಏಕತಾ ಜನಾಶೀರ್ವಾದ ಯಾತ್ರೆ ಮುಂದುವರೆದಿದೆ. ಯಾವುದೇ ಗ್ರಾಮಕ್ಕೆ ಹೋದರೂ ಜನರು ಬೆಂಬಲಿಸಿ ಆಶೀರ್ವಾದ ಮಾಡುತ್ತಿದ್ದಾರೆ. ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ. ಕ್ಷೇತ್ರದ ಜನಸೇವೆಯೊಂದೇ ನನ್ನ ಧ್ಯೇಯವಾಗಿದೆ ಎಂದು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಔರಾದ ಕ್ಷೇತ್ರದ ಚುನಾವಣಾ ಅಭ್ಯರ್ಥಿ ರವೀಂದ್ರ ಸ್ವಾಮಿ ತಿಳಿಸಿದರು.
ತಾಲೂಕಿನ ಶೆಂಬೆಳ್ಳಿ, ಜೀರ್ಗಾ ಕೆ. ಜೀರ್ಗಾ ಬಿ. ಮತ್ತು ಮುಸ್ತಾಪುರ ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಗ್ರಾಮಸ್ಥರ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದರು. ಔರಾದ ಹಾಗೂ ಕಮಲನಗರ ತಾಲೂಕಿನ ಮತದಾರರು ಪ್ರಬುದ್ಧರಾಗಿದ್ದಾರೆ. ಈ ಹಿಂದಿನ ಶಾಸಕರ ಮೂರು ಅವಧಿಯ ಆಡಳಿತಕ್ಕೆ ಬೇಸತ್ತು ಈ ಬಾರಿ ಸ್ವಾಭಿಮಾನಕ್ಕೆ ಮತ್ತು ಅಭಿವೃದ್ಧಿಗೆ ಕೈಜೋಡಿಸುತ್ತೇವೆಂದು ಪಣ ತೊಟ್ಟಿದ್ದಾರೆ. ಶಾಸಕ ಪ್ರಭು ಚವ್ಹಾಣ ಅವರು ನನ್ನ ಜನಸೇವೆ ಕಂಡು ಹತಾಶರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ನಮ್ಮ ಫೌಂಡೇಶನ್ ಮಾಡಿರುವ ಕಾರ್ಯ ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ತಾಲೂಕಿನಾದ್ಯಂತ ನನಗೆ ಸಿಗುತ್ತಿರುವ ಜನಸ್ಪಂದನೆ ಕಂಡು ಹೌಹಾರಿದ್ದಾರೆ. ನನಗೆ ಯಾರ ಬಗ್ಗೆಯೂ ತಾತ್ಸಾರ ಇಲ್ಲ. ನನ್ನ ತಾಲೂಕಿನ ಜನತೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಬೇಕೆಂಬುದು ಅದಮ್ಯ ಬಯಕೆಯಾಗಿದೆ. ಆದ್ದರಿಂದ ಜನತೆ ಈ ಬಾರಿ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ಭರವಸೆ ಇದೆ ಎಂದು ಸ್ವಾಮಿ ತಿಳಿಸಿದರು. ಏಕತಾ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಗ್ರಾಮಗಳಲ್ಲಿರುವ ವಿವಿಧ ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ಸಾವಿರಾರು ಜನರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ರವೀಂದ್ರ ಸ್ವಾಮಿಯವರಿಗೆ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಶಂಕರ, ನಾಗನಾಥ, ನಬಿ, ರಾಜಶೇಖರ ದೇಶಮುಖ, ವಿವೇಕಾನಂದ ಸ್ವಾಮಿ, ಉಮಾಕಾಂತ ಮೇತ್ರೆ, ಮಾದಪ್ಪ ಕನ್ನಾಡೆ, ಶಿವಕಾಂತ ಸ್ವಾಮಿ, ರತಿಕಾಂತ, ನಾಗೇಶ ಭಂಗೂರೆ, ಪ್ರಶಾಂತ, ಪ್ರವೀಣ, ಸಿದ್ದಾರ್ಥ, ಮಹಾದೇವ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.