
ಔರಾದ:ಎ.16: ಆ ದೇವರು ನನಗೆ ಎಲ್ಲವನ್ನೂ ನೀಡಿದ್ದಾನೆ. ವೈಯಕ್ತಿಕವಾಗಿ ನನಗೆ ಏನೂ ತೊಂದರೆಯಿಲ್ಲ. ಹೀಗಾಗಿ ನಾನು ಜನಿಸಿದ ತಾಲೂಕಿಗೆ ಹಾಗೂ ಇಡೀ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಜನಸೇವೆ ಮಾಡುವುದೇ ನನ್ನ ಪರಮಗುರಿ. ನನ್ನ ಸೇವೆಯಲ್ಲಿ ಕಿಂಚಿತ್ತೂ ಕಡಿಮೆ ಕಂಡುಬಂದರೆ ನೀವು ನನಗೆ ಕೇಳಬಹುದು. ನಿಮ್ಮ ತಾಲೂಕಿನ ಮನೆಮಗನಾದ ನನಗೆ ಒಮ್ಮೆ ಆಶಿರ್ವಾದ ಮಾಡಬೇಕೆಂದು ಔರಾದ ತಾಲೂಕಿನ ನಾಗೂರಾ ಬಿ. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ರವೀಂದ್ರ ಸ್ವಾಮಿ ತಿಳಿಸಿದರು. ಶ್ರೀ ಸೀಮಿ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದರ್ಶನ ಪಡೆದು ಬಳಿಕ ಜನರೊಂದಿಗೆ ಚರ್ಚಿಸಿದರು. ರವೀಂದ್ರ ಸ್ವಾಮಿಯವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಭವ್ಯ ಸ್ವಾಗತ ಕೋರಿದರು.
ಇಡೀ ರಾಜ್ಯದಲ್ಲಿಯೇ ಔರಾದ ತಾಲೂಕಾ ಅತ್ಯಂತ ಹಿಂದುಳಿದಿದೆ. 15 ವರ್ಷ ಆಡಳಿತ ಮಾಡಿದವರು ತಾಲೂಕಾವನ್ನು ಅಭಿವೃದ್ಧಿ ಮಾಡುವ ಗೋಜಿಗೆ ಹೋಗಲಿಲ್ಲ. ಇನ್ಮುಂದೆಯಾದರೂ ತಾಲೂಕಿನ ಜನತೆ ಎಚ್ಚೆತ್ತುಕೊಂಡು ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಜೋಡಿಸಬೇಕಾಗಿದೆ. ಏಪ್ರಿಲ್ 19 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲರೂ ಸೇರಿ ನಾಮಪತ್ರ ಸಲ್ಲಿಸೋಣ. ತಾಲೂಕಿನಲ್ಲಿ ಒಂದು ಹೊಸ ವಿಚಾರಗಳೊಂದಿಗೆ ಅಭಿವೃದ್ಧಿಯ ಕುರಿತು ಚರ್ಚಿಸೋಣ. ಐಕ್ಯತೆಯಿಂದ ಹೋರಾಟ ಮಾಡೋಣ ಎಂದು ತಿಳಿಸಿದರು.
ಒಬ್ಬ ಶಾಸಕರಾದವರಿಗೆ ಸರ್ಕಾರ ಟಿ.ಎ. ಡಿ.ಎ. ಗಾಡಿ ಘೋಡಾ ಎಲ್ಲವೂ ನೀಡುತ್ತೆ. ಒಂದು ಪೆನ್ನು ಕಾಗದದ ಖರ್ಚು ಕೂಡಾ ಸರ್ಕಾರ ನೀಡುತ್ತೆ. ಹೀಗಿರುವಾಗ ಜನಸೇವೆ ಮಾಡುವುದು ಶಾಸಕರಾದವರ ಕರ್ತವ್ಯವಾಗಬೇಕು. ಅದು ಬಿಟ್ಟು ಜನರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಾಗ ಜನರಿಗೆ ಮೋಸ ಮಾಡಿದಂತಾಗುತ್ತದೆ. ಜನರಿಂದ ಆರಿಸಿ ಬಂದು ನಾನೇ ರಾಜಾ ಎಂದು ಬೀಗಿದಾಗ ಅದು ತಪ್ಪಾಗುತ್ತದೆ. ಆದ್ದರಿಂದ ಅಹಂಕಾರ, ಸ್ವಾರ್ಥ, ಭ್ರಷ್ಟಾಚಾರ ತಾಂಡವವಾಡದಂತೆ ನಾವೆಲ್ಲರೂ ಸೇರಿ ನೋಡಿಕೊಳ್ಳೋಣ. ತಾಲೂಕಿನ ಅಭಿವೃದ್ದಿ ತಾಲೂಕಿನ ಮಕ್ಕಳಿಂದ ಸಾಧ್ಯವಾಗುತ್ತದೆಯೇ ವಿನಃ ಹೊರಗಿನವರಿಂದ ಆಗುವುದಿಲ್ಲ. ಆದ್ದರಿಂದ ಒಮ್ಮೆ ಸಹಕರಿಸಿ ಎಂದು ರವೀಂದ್ರ ಸ್ವಾಮಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಉಮೇಶ ರೆಡ್ಡಿ, ಉಮಾಕಾಂತ ದೇಶಮುಖ, ಸತೀಶ ದೇಶಮುಖ, ನೀಲಕಂಠ ಮಸ್ಕಲೆ, ಸೋಮನಾಥ ದೇಶಮುಖ, ಸಂಗಪ್ಪ ಮಸ್ಕಲೆ, ಸಂತೋಷ ಬಿರಾದಾರ, ಸಂಜೀವಕುಮಾರ ಅಷ್ಟೂರೆ, ಅಮೃತ ಮಸ್ಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.