ಔರಾದ ಕೋರ್ಟ್ ಕಾಂಪ್ಲೆಕ್ಸ್ ಗೆ ಶೀಘ್ರ ಚಾಲನೆ: ಶಾಸಕ ಪ್ರಭು ಚವ್ಹಾಣ

ಔರಾದ:ಸೆ.9: ಪಟ್ಟಣದಲ್ಲಿ ಸುಸಜ್ಜಿತವಾದ ನ್ಯಾಯಾಲಯ ಕಟ್ಟಡ ನಿರ್ಮಿಸಬೇಕೆಂಬ ಆಶಯ ಈಡೇರುವ ಕಾಲ ಸಮೀಪಿಸಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕರು, 13.20 ಕೋಟಿಯ ಯೋಜನೆಗೆ ಹಿಂದೆ ನಾನು ಸಚಿವನಾಗಿದ್ದಾಗ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಕಾರಣಾಂತರಗಳಿಂದ ಕೆಲಸ ವಿಳಂಬವಾಗಿತ್ತು. ಇದೀಗ ಕೆಲಸ ಟೆಂಡರ್ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

1.15 ಎಕರೆ ನಿವೇಶನದಲ್ಲಿ ಭವ್ಯವಾದ ಬಹುಮಹಡಿಯ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಕೋರ್ಟ್ ಹಾಲ್ ಗಳು, ನ್ಯಾಯಾಧೀಶರ ಕೊಠಡಿಗಳು, ಗ್ರಂಥಾಲಯ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳು ಇರಲಿವೆ ಎಂದಿದ್ದಾರೆ.

ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಶಾಲೆ-ಕಾಲೇಜುಗಳು, ವಸತಿ ನಿಲಯ, ಆಸ್ಪತ್ರೆ, ಅಂಗನವಾಡಿ ಕಟ್ಟಡ, ಪಶು ಆಸ್ಪತ್ರೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ರೀತಿಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ನ್ಯಾಯಾಲಯ ಕಟ್ಟಡ ಮಾತ್ರ ಹಳೆಯದಾಗಿತ್ತು. ಔರಾದನಲ್ಲಿಯೂ ಸುಂದರವಾದ ನ್ಯಾಯಾಲಯ ಸಂಕೀರ್ಣ ನಿರ್ಮಿಸಬೇಕೆಂಬ ಮಹಾದಾಸೆಯಿತ್ತು. ವಕೀಲರ ಸಂಘದವರು ಕೂಡ ಸಾಕಷ್ಟು ಬಾರಿ ಬೇಡಿಕೆ ಸಲ್ಲಿಸಿದ್ದರು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಕ್ಷೇತ್ರದ ಜನತೆ ಪ್ರತಿಯೊಂದಕ್ಕೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ಸತತ ಪ್ರಯತ್ನ ವಹಿಸಿ ಅನುದಾನ ತರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸುಸಜ್ಜಿತವಾದ ಕೋರ್ಟ್ ಕಟ್ಟಡ ನಿರ್ಮಾಣವಾಗಲಿದೆ ಎಂದಿದ್ದಾರೆ.