
ಬೀದರ್: ಮಾ.7:ಬಸವಕಲ್ಯಾಣದಿಂದ ಆರಂಭವಾಗಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಶನಿವಾರ ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಂಚರಿಸಿತು. ಪಕ್ಷದ ರಾಜ್ಯದ ಪ್ರಮುಖ ನಾಯಕರು ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಶುಕ್ರವಾರ ಹುಮನಾಬಾದ್, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಔರಾದ್ ಕ್ಷೇತ್ರದ ವಡಗಾಂವ್‍ಗೆ ಬಂದಯಾತ್ರೆಗೆ ಪಕ್ಷದ ಪ್ರಮುಖರು ಸ್ವಾಗತ ನೀಡಿದರು. ಅಲ್ಲಿಂದ ಸಂತಪುರ, ಔರಾದ್ ಪಟ್ಟಣದಲ್ಲಿ ಸಂಚರಿಸಿ ಬೀದರ್ ಕ್ಷೇತ್ರಕ್ಕೆ ಬಂದಿತು.
ನಗರದ ಸಾಯಿ ಆದರ್ಶ ಪ್ರಾಥಮಿಕ ಶಾಲೆಯ ಆವರಣದಿಂದ ಆರಂಭವಾದ ವಿಜಯ ಸಂಕಲ್ಪ ಯಾತ್ರೆ ಸ್ಟೇಡಿಯಂ ರಸ್ತೆ, ಹರಳಯ್ಯ ವೃತ್ತ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ತೆರಳಿತು.
ಬೀದರ್ ತಾಲ್ಲೂಕಿನ ಕಮಠಾಣ, ಕಾಡವಾದ, ಬಗದಲ್, ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಚಾಂಗಲೇರಾ ತಲುಪಿತು. ಚಾಂಗಲೇರಾದಲ್ಲಿ ವೀರಭದ್ರೇಶ್ವರ ದರ್ಶನ ಪಡೆದು ಬಿಜೆಪಿ ಮುಖಂಡರು ಚಿಂಚೋಳಿಗೆ ಪ್ರಯಾಣ ಬೆಳೆಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ್ ಮುಳೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕ ಶರಣು ಸಲಗರ,ರಾಜ್ಯ ಮಹಿಳಾ ಸಹಕಾರ ಮಂಡಳ ಅಧ್ಯಕ್ಷ ಶಕುಂತಲಾ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ ಗಾದಗಿ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಶಿವರಾಜ ಗಂದಗೆ, ಬಾಬು ವಾಲಿ, ಗುರುನಾಥ ಜ್ಯಾಂತಿಕರ್, ಶಶಿ ಹೊಸಳ್ಳಿ, ಪಾಲ್ಗೊಂಡಿದ್ದರು.
ಜೆಡಿಎಸ್ ಮುಖಂಡರು ಬಿಜೆಪಿಗೆ (ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ನಡೆದ ಸಾರ್ವಜನಿಕ ಸಭೆಯಲ್ಲಿ ಅನೇಕ ಮುಖಂಡರು ಜೆಡಿಎಸ್ ತೊರೆದು, ಬಿಜೆಪಿಗೆ ಸೇರ್ಪಡೆಯಾದರು.
ಔರಾದ್: ಜಿಲ್ಲೆಯ ಗಡಿ ತಾಲ್ಲೂಕು ಔರಾದ್ ಪಟ್ಟಣದಲ್ಲಿ ಶನಿವಾರ ಬಿಜೆಪಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದೆ.
ಮಧ್ಯಾಹ್ನ 1 ಗಂಟೆಗೆ ಪಟ್ಟಣಕ್ಕೆ ಬಂದ ಬಿಜೆಪಿ ನಾಯಕರು ಮೊದಲಿಗೆ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋದಲ್ಲಿ ಪಾಲ್ಗೊಂಡರು.