ಔರಾದ್ ತಹಸಿಲ್ದಾರರಿಗೆ ಆವಾಜ್ ಹಾಕಿದ ಸಚಿವ ಚವ್ಹಾಣ್

ಬೀದರ: ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ನಿನ್ನೆ ಔರಾದ್ ನ್ಯಾಯಾಲಯ ಆವರಣಕ್ಕೆ ಭೇಟಿ ನೀಡಿ, ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದರು.
ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಲು ವಿಳಂಬ ಮಾಡುತ್ತಿರುವ ತಹಸೀಲ್ದಾರರನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಔರಾದ್‍ನಲ್ಲಿ ಭವ್ಯವಾದ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಹಿಂದೆ ಶಾಸಕನಾಗಿದ್ದಾಗ ಹಲವು ಬಾರಿ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಬೇಗ ಮಂಜೂರಾತಿ ನೀಡುವಂತೆ ಒತ್ತಾಯಿಸಿದ್ದೆ. ಅದರ ಫಲವಾಗಿ 2017-18ನೇ ಸಾಲಿನಲ್ಲಿ ಔರಾದ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಬೇಗ ನಿವೇಶನ ನೀಡುವಂತೆ ಹಲವು ಸಭೆಗಳಲ್ಲಿ ಮತ್ತು ದೂರವಾಣಿ ಮೂಲಕವು ತಿಳಿಸಲಾಗಿದೆ. ಆದರೂ ಸಹ ನಿವೇಶನ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ತಾವು ಶಾಸಕನಾದ ನಂತರ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಶಾಲೆ-ಕಾಲೇಜುಗಳು, ವಸತಿ ನಿಲಯಗಳು, ಆಸ್ಪತ್ರೆಗಳು ಸೇರಿದಂತೆ ಹಲವಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಿಸಬೇಕೆಂದು ತಾಲೂಕಿನ ವಕೀಲರು ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದವರ ಬಹು ದಿನಗಳ ಬೇಡಿಕೆಯಾಗಿದೆ. ಕೂಡಲೇ ನಿವೇಶನ ಹಸ್ತಾಂತರಿಸಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಹಸೀಲ್ದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಅಂದಾಜು 13 ಕೋಟಿ ರೂ.ಗಳ ವೆಚ್ಚದಲ್ಲಿ 1 ಎಕರೆ 15 ಗುಂಟೆ ವ್ಯಾಪ್ತಿಯಲ್ಲಿ ಕೋರ್ಟ್ ಸಂಕೀರ್ಣ ನಿರ್ಮಿಸಲಾಗುತ್ತಿದೆ. ನಿವೇಶನ ಪತ್ರಗಳು ಹಸ್ತಾಂತರವಾದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಔರಾದ ಪಟ್ಟಣ ಪಂಚಾಯಿತಿ ಸದಸ್ಯ ಸಂತೋಷ ಪೊಕಲ್ವಾರ, ಕೆರಬಾ ಪವಾರ್, ರಮೇಶ ದೇವಕತ್ತೆ, ಶಶಿರಾವ ಕೋಳಿ, ಪ್ರಕಾಶ ಅಲ್ಮಾಜೆ, ಶಿವಾಜಿ ಚವ್ಹಾಣ್, ಶರಣಪ್ಪ ಪಂಚಾಕ್ಷರಿ, ಸಂಜೀವ ಒಡೆಯರ್, ಪ್ರಕಾಶ ಭಂಗಾರೆ, ಬಿ.ಕೆ ನಾಯಕ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.