ಔರಾದ್‍ನಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ

ಔರಾದ್ :ಜ.11: ಪಹಣಿ ತಿದ್ದುಪಡಿ, ರೇಷನ್ ಕಾರ್ಡ್, ವಿಕಲಚೇತನರ ಮಾಶಾಸನ ಸೇರಿದಂತೆ ಹಲವು ಬೇಡಿಕೆಗಳು ಹೊತ್ತು ಪಟ್ಟಣದ ತಹಸೀಲ್ ಕಛೇರಿಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಔರಾದ್ ಪಟ್ಟಣದ ತಹಸೀಲ್ ಕಛೇರಿಯಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ ವಿವಿಧ ಗ್ರಾಮಗಳ ಜನರು ಜಿಲ್ಲಾಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಅಲವತ್ತುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 55 ಮಂದಿ ಅಹವಾಲು ಸಲ್ಲಿಸಿದರು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜನರ ಸಮಸ್ಯೆ ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ ಗಂಭೀರ ಸಮಸ್ಯೆಗಳನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಆದೇಶಿಸಿದರು.

ಜಟಿಲವಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಗೆ ಬರುವಂತೆ ತಿಳಿಸಿದ ಅವರು, ಜನರ ಯಾವುದೇ ಸಮಸ್ಯೆಗಳನ್ನು ವಿಳಂಬ ಮಾಡದಂತೆ ತತಕ್ಷಣ ಸ್ಪಂದಿಸಿ ಪರಿಹರಿಸುವಂತೆ ಸ್ಥಳದಲ್ಲಿದ್ಧ ಎಲ್ಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ಅಮರೇಶ್ವರ ದೇವಸ್ಥಾನ ಹಿಂಬದಿಯಲ್ಲಿನ ರುದ್ರಭೂಮಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ನಾಗರಿಕ ಸಂಘರ್ಷ ಸಮಿತಿಯ ಪ್ರಮುಖರಾದ ಬಸವರಾಜ ಶಟಕಾರ್ ಅವರ ನೇತೃತ್ವದಲ್ಲಿ ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪೂರೆ ನೇತೃತ್ವದಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಲಗಳಿಗೆ ರಸ್ತೆ, ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಅವಕಾಶ, ಜೆಜೆಎಂ ಕಳಪೆ ಕಾಮಗಾರಿ ಪರಿಶೀಲನೆಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‍ಎಲ್, ಜಿಪಂ ಸಿಇಒ, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೆಂದ್ರಸಿಂಗ್ ಠಾಕೂರ್, ಎಡಿಎ???ರ್ ಬಾಳಪ್ಪಗೌಡ ಪಾಟೀಲ್, ಆಹಾರ ಶಿರಸ್ತೆದಾರ ರವಿ ಸೂರ್ಯವಂಶಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


ಸ್ಮಶಾನ ಭೂಮಿ ಒತ್ತುವರಿ ತೆರವಿಗೆ ಆಗ್ರಹ

ಪಟ್ಟಣದ ಹೃದಯ ಭಾಗದಲ್ಲಿರುವ ಅಮರೇಶ್ವರ ರುದ್ರ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ಅಂಗಡಿ ಮುಂಗಟ್ಟು ನಡೆಸುತ್ತಿದ್ದಾರೆ ಈ ಮುಂಚೆ ಹಲವು ಬಾರಿ ಮನವಿ ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ, ಆದ್ದರಿಂದ ಕೂಡಲೇ ಸ್ಮಶಾನ ಭೂಮಿ ಅಳತೆ ಮಾಡಿ ಅತಿಕ್ರಮಣ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಬೇಕೆಂದು ನಾಗರಿಕ ಸಂಘರ್ಷ ಸಮಿತಿ ಅಧ್ಯಕ್ಷ ಬಸವರಾಜ ಶೆಟಕಾರ ಮನವಿ ಮಾಡಿದ್ದಾರೆ