ಔರಾದ್‍ನಲ್ಲಿ ಅಯೋಧ್ಯೆ ಮಂತ್ರಾಕ್ಷತೆ ಕಳಶಕ್ಕೆ ಸ್ವಾಗತ

ಬೀದರ:ಡಿ.30:ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಜನವರಿ 22ರಂದು ಜರುಗಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಆಯೋಧ್ಯೆಯಿಂದ ಔರಾದಗೆ ಬಂದಿರುವ ಅಕ್ಷತಾ ಕಳಶಕ್ಕೆ ಡಿಸೆಂಬರ್ 29ರಂದು ಪಟ್ಟಣದ ಅಮರೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಡೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘ ಚಾಲಕ ಹಣಮಂತರಾವ ಪಾಟೀಲ ನೇತೃತ್ವ ವಹಿಸಿದ್ದರು.
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಭಾಗವಹಿಸಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿದರು. ಆಯೋಧ್ಯೆ ಶ್ರೀರಾಮಮಂದಿರದ ರಾಮದರ್ಬಾರ್‍ನಲ್ಲಿ ವಿಶೇಷವಾಗಿ ಪೂಜಿಸಲ್ಪಟ್ಟ ಈ ಮಂತ್ರಾಕ್ಷತೆಯು ಮನೆ ಮನೆಗೆ ತಲುಪಲಿದೆ. ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ದಿನದಂದು ಕುಟುಂಬಸ್ಥರು ಸೇರಿ ಭಕ್ತಿಭಾವದಿಂದ ರಾಮನಾಮ ಜಪಿಸಬೇಕು, ಪ್ರಾರ್ಥನೆ ಸಲ್ಲಿಸಬೇಕು. ಅಂದು ದೀಪ ಬೆಳಗಿಸುವ ಮೂಲಕ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸಬೇಕು
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಚಾಲಕ ಹಣಮಂತರಾವ ಪಾಟೀಲ ಮಾತನಾಡಿ, ಇಡೀ ಭಾರತವು ಹಲವು ವರ್ಷಗಳಿಂದ ಕಾಣುತ್ತಿದ್ದ ಕನಸು ಈಗ ಸಾಕಾರವಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಟಾಪನೆ ನೆರವೇರಿಸಲಿದ್ದು, ಆ ದಿನ ಐತಿಹಾಸಿಕ ದಿನವಾಗಲಿದೆ ಎಂದರು.
ದೇಶದ ಪ್ರತಿ ಮನೆಗೂ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಔರಾದ(ಬಿ) ತಾಲ್ಲೂಕಿಗೂ ಆಗಮಿಸಿದ್ದು, ಪೂಜೆ ನೆರವೇರಿಸಿದ ನಂತರ ಪ್ರತಿ ಹಳ್ಳಿಗೂ ಮಂತ್ರಾಕ್ಷತೆಯ ಜೊತೆಗೆ ರಾಮನ ಭಾವಚಿತ್ರ ಹಾಗೂ ರಾಮಮಂದಿರದ ಬಗ್ಗೆ ಸಮಗ್ರ ಮಾಹಿತಿಯುಳ್ಳ ಕರಪತ್ರಗಳನ್ನು ತಲುಪಿಸಲಾಗುತ್ತದೆ. ಪ್ರತಿಯೊಬ್ಬರು ಶ್ರೀರಾಮ ಪ್ರಾಣಪತ್ರಿಷ್ಟಾಪನೆಯ ದಿನದಂದು ತಾವಿರುವ ಸ್ಥಳದಿಂದಲೇ ರಾಮಜಪ ಮಾಡುತ್ತಾ, ಭಕ್ತಿಭಾವದಿಂದ ಪೂಜೆ ಮತ್ತು ಪ್ರಾರ್ಥನೆ ನೆರವೇರಿಸಬೇಕು ಎಂದು ಹೇಳಿದರು. ಡೋಣಗಾಂವ ಪೂಜ್ಯರಾದ ಶಂಭುಲಿಂಗ ಶಿವಾಚಾರ್ಯರು, ಹಣೆಗಾಂವ ಮಠದ ಪೂಜ್ಯ ಶಂಕರಲಿಂಗ ಶಿವಾಚಾರ್ಯರು ಮಂತ್ರಾಕ್ಷತೆಯ ವಿಶೇಷತೆಯ ಬಗ್ಗೆ ತಿಳಿಸಿದರು.
ಬಳಿಕ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಳ್ಳಿ ಹಳ್ಳಿಗಳಿಗೆ ತಲುಪಿಸಲಿರುವ ಅಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಕರಪತ್ರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಅಶೋಕ ಅಲ್ಮಾಜೆ, ಬಂಟಿ ರಾಂಪೂರೆ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ರಮೇಶ ಗೌಡಾ, ಮಾರುತಿರೆಡ್ಡಿ ಪಟ್ನೆ, ಉದಯ ಸೋಲಾಪೂರೆ, ಶರಣಪ್ಪ ಪಂಚಾಕ್ಷರಿ, ಶ್ರೀನಿವಾಸ ಖೂಬಾ, ರಾಜಕುಮಾರ ಶೆಳ್ಕೆ ಹಾಗೂ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.