ಔರಾದ್ಕರ್​ ವರದಿ ಯಥಾವತ್ತಾಗಿ ಜಾರಿಗೆ ಸಿಎಂಗೆ ಎಂಬಿಪಾ ಒತ್ತಾಯ

ಬೆಂಗಳೂರು,ನ.14-ಪೊಲೀಸರ ವೇತನ ಹೆಚ್ಚಳ ಮಾಡುವ ಸಲುವಾಗಿ ನೇಮಕಗೊಂಡಿದ್ದ ರಾಘವೇಂದ್ರ ಔರಾದ್ಕರ್​ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಮುಖ್ಯ ಮಂತ್ರಿ‌ ಯಡಿಯೂರಪ್ಪ ಅವರಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಎಂ.ಬಿ.ಪಾಟೀಲ್ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಶ್ರೇಣಿ ಹೆಚ್ಚಿಸುವಿಕೆ, ಭತ್ಯೆ ಹಾಗೂ ಇತರೆ ಸೌಕರ್ಯಗಳನ್ನು ನೀಡುವ ಕುರಿತು ಔರಾದ್ಕರ್​ ವರದಿಯಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ.
ಆದರೆ ರಾಜ್ಯ ಸರ್ಕಾರ ಈ ವರದಿಯನ್ನು ಭಾಗಶಃ ಮಾತ್ರ ಜಾರಿಗೊಳಿಸಿದ್ದು, ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಜಾರಿಗೆ ತಂದಿಲ್ಲ. ಹಣಕಾಸು ಇಲಾಖೆ ನಿರ್ಧಾರದಿಂದ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತದೆ.
ಆದರೆ ಈಗಾಗಲೇ ಅನೇಕ ವರ್ಷಗಳ ಕಾಲ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಅನ್ವಯವಾಗದೆ ಇರುವುದು ನಿರಾಶಾದಾಯಕ. ನಾಡಿನ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗೆ ನಾವು ಇನ್ನೂ ಹೆಚ್ಚು ಪ್ರೋತ್ಸಾಹ, ವೇತನ ಹಾಗೂ ಭತ್ಯೆ ಹೆಚ್ಚಿಸುವ ಮೂಲಕ ಇತರೆ ಸೌಲಭ್ಯಗಳನ್ನು ನೀಡಿ ಅವರನ್ನು ಗೌರವಿಸಬೇಕಿದೆ ಎಂದಿದ್ದಾರೆ.
ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಪಣಕ್ಕಿಟ್ಟು, ಕರ್ತವ್ಯ ನಿರ್ವಹಿಸಿರುವ ರಾಜ್ಯದ ಪೊಲೀಸ್ ಇಲಾಖೆಯ ಸಮಸ್ತ ಸಿಬ್ಬಂದಿಗೆ, ಔರಾದ್ಕರ್​ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ನ್ಯಾಯ ದೊರಕಿಸಬೇಕಿದೆ.
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಕತ್ತಲೆಯಿಂದ ಬೆಳಕಿನಡೆಗೆ ಪೊಲೀಸ್ ಸಿಬ್ಬಂದಿಯ ಬದುಕನ್ನು ಬೆಳಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಆದ್ದರಿಂದ ಔರಾದ್ಕರ್​ ವರದಿಯನ್ನು ಸಂಪೂರ್ಣವಾಗಿ, ಯಥಾವತ್ತಾಗಿ ಜಾರಿಗೊಳಿಸಲು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.