ಔರಂಗಾಬಾದ್ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಔರಂಗಾಬಾದ್,ಡಿ.೨೬- ಮಹಾರಾಷ್ಟ್ರದ ಔರಂಗಾಬಾದ್‌ನ ಮೃಗಾಲಯದಲ್ಲಿ ಹೊಸ ಅತಿಥಿಗಳ ಆಗಮನವಾಗಿದೆ.
ಸಮೃದ್ದಿ ಮತ್ತು ಸಿದ್ದಾರ್ಥ್ ಹುಲಿಗಳು ೫ ಮರಿಗಳಿಗೆ ಜನ್ಮ ನೀಡಿವೆ ಎಂದು ಔರಂಗಾಬಾದ್‌ನ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.
ಈ ೫ ಮುದ್ದಾದ ಮರಿಗಳು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದೆ.
ಐದು ಹುಲಿಗಳಿಗೆ ಜನ್ಮ ನೀಡಿರುವ ಸಮೃದ್ಧಿ ಹಾಲುಣಿಸುತ್ತಿದ್ದು, ಅದರ ಆರೋಗ್ಯ ಸ್ಥಿರವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೈಕೊರೆಯುವ ಚಳಿಯಿಂದ ಅವುಗಳನ್ನು ರಕ್ಷಿಸುವುದು ಮೃಗಾಲಯದ ಸಿಬ್ಬಂದಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅವುಗಳ ಚಲನ-ವಲನಗಳನ್ನು ವೀಕ್ಷಿಸಲು ಹೀಟರ್, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಿನದ ೨೪ ಗಂಟೆಯು ಲಾಲನೆ-ಪಾಲನೆ ಮಾಡಲಾಗುತ್ತಿದೆ. ತನ್ನ ತಾಯಿಯನ್ನೊರತುಪಡಿಸಿ ಬೇರೆ ಯಾರು ಕೂಡ ಮರಿಗಳ ಹತ್ತಿರ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇದೇ ಹುಲಿಗಳು ೨೦೧೬, ನ. ೧೬ ರಂದು ೧ ಗಂಡು ಹಾಗೂ ೨ ಹೆಣ್ಣು ಹುಲಿಗಳಿಗೆ ಜನ್ಮ ನೀಡಿತ್ತು. ೨೦೧೯ ಏ. ೨೬ ರಂದು ಒಂದು ಗಂಡು ಹಾಗೂ ೩ ಹೆಣ್ಣು ಹುಲಿ ಮರಿಗಳಿಗೆ ಜನ್ಮ ನೀಡಿತ್ತು. ಈಗ ೫ ಮರಿಗಳಿಗೆ ಜನ್ಮ ನೀಡಿವೆ ಎಂದು ಮುನಿಸಿಪಲ್ ಕಾರ್ಪೋರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.