ಔರಂಗಾಬಾದ್, ಉಸ್ಮಾನ್ ನಗರಗಳ ಹೆಸರು ಬದಲು

ಮುಂಬೈ, ಫೆ.೨೫- ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಔರಂಗಾಬಾದ್ ಗೆ ಛತ್ರಪತಿ ಸಂಭಾಜಿ ನಗರ ಎಂದು ಮತ್ತು ಒಸ್ಮಾನಾಬಾದ್ ನಗರಕ್ಕೆ ಧಾರಾಶಿವ ಎಂದೂ ಮರುನಾಮಕರಣ ಮಾಡಲಾಗಿದೆ. ಈ ಎರಡೂ ನಗರಗಳ ಮರು ನಾಮಕರಣ ಪ್ರಸ್ತಾಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕೇಂದ್ರ ಸರ್ಕಾರದ ಎದುರು ಇಟ್ಟಿದ್ದರು.

ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿದ್ದು, ಹೆಸರು ಬದಲಾವಣೆಗೆ ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ನಗರಗಳ ಮರುನಾಮಕರಣ ಅನುಮೋದಿಸಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಂದುಕೊಂಡಿದ್ದನ್ನು ಸಾಧಿಸಿದೆ ಎಂದು ಹೇಳಿದ್ದಾರೆ.

ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಔರಂಗಾಬಾದ್‌ಗೆ ಇಡಲಾಗಿತ್ತು. ಹೈದರಾಬಾದ್‌ನ ೭ ನೇ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಹೆಸರನ್ನು ಉಸ್ಮಾನಾಬಾದ್‌ಗೆ ಇಡಲಾಗಿತ್ತು. ಈ ಪ್ರದೇಶವು ೧೯೪೮ರವರೆಗೆ ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು.

ಸದ್ಯ ಔರಂಗಬಾದ್‌ಗೆ ಛತ್ರಪತಿ ಸಾಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಸಂಭಾಜಿಯು ಛತ್ರಪತಿ ಶಿವಾಜಿಯ ಹಿರಿಯ ಮಗ. ತನ್ನ ತಂದೆ ಸ್ಥಾಪಿಸಿದ ಮರಾಠ ರಾಜ್ಯದ ಎರಡನೇ ರಾಜನೂ ಹೌದು. ೧೬೮೯ ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿಯನ್ನು ಗಲ್ಲಿಗೇರಿಸಲಾಗಿತ್ತು.

ಇನ್ನು ಧಾರಾಶಿವ ಎಂಬುದು ಉಸ್ಮಾನಾಬಾದ್ ಬಳಿಯ ಗುಹೆಗಳ ಹೆಸರು. ಇವು ೫ ರಿಂದ ೮ ನೇ ಶತಮಾನದಷ್ಟು ಹಳೆಯವು ಎಂದು ನಂಬಲಾಗಿದೆ.

ಅಲ್ಲದೆ, ಸಂಘ ಪರಿವಾರದ ಸಂಘಟನೆಗಳು ಎರಡು ನಗರಗಳ ಹೆಸರು ಬದಲಾಯಿಸಲು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದವು. ಅದರಂತೆ ಈಗ ಹೆಸರು ಬದಲಾಯಿಸಲಾಗಿದ್ದು, ಕೇಂದ್ರದಿಂದಲೂ ಸಮ್ಮತಿ ದೊರೆತಿದೆ.