ಔದ್ಯೋಗಿಕ ಅಭಿವೃದ್ಧಿಗೆ ಕಂಪ್ಯುಟರ್ ಜ್ಞಾನ ಅಗತ್ಯ: ಲಕ್ಷ್ಮಣ ತುರೆ

ಬೀದರ್:ಎ.25: ಇಂದಿನ ಉದ್ಯೋಗ ಅಥವಾ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಕಂಪ್ಯುಟರ್ ಜ್ಞಾನ ಅಗತ್ಯವಾಗಿದೆ ಎಂದು ಡಯಟ್ ಕಾಲೇಜಿನ ಪ್ರಾಧ್ಯಾಪಕ ಲಕ್ಷ್ಮಣ.ಎಸ್.ತುರೆ ತಿಳಿಸಿದರು.

ಇತ್ತಿಚೀಗೆ ನಗರದ ಆದರ್ಶನಗರ ಬಡಾವಣೆಯಲ್ಲಿ ನೆಹರು ಯುವ ಕೇಂದ್ರ ಹಾಗೂ ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ತ್ರೈಮಾಸಿಕ ಕಂಪ್ಯುಟರ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕಂಪ್ಯುಟರ್ ಕಲಿಕೆ ನಮ್ಮಲ್ಲಿ ಹೊಸ ಹೊಸ ಆಲೋಚನೆಗಳು ಹುಟ್ಟು ಹಾಕಲು ಸಹ ಸಹಕಾರಿಯಾಗುತ್ತದೆ. ಕಂಪ್ಯುಟರ್ ಜ್ಞಾನ ಇಲ್ಲದೇ ನಾವಿಂದು ಯಾವ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದರು.

ಮುಖ್ಯ ಅತಿಥಿಗಳಾಗಿ ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅದ್ಯಕ್ಷ ಕಾಶಿನಾಥ ಪಾಟೀಲ ಮಾತನಾಡಿ, ಇಂದು ಯುವಜನರು ಸೋಮಾರಿಗಳಾಗಿ ಯಾವ ಕಾಯಕದಲ್ಲೂ ಆಸಕ್ತಿ ತೋರುತ್ತಿಲ್ಲ. ಪಾಶ್ಚಾತ್ಯ ಸಂಸ್ಕøತಿ ಮೈಗೂಡಿಸಿಕೊಂಡು ತನ್ನತನ ಮರೆತು ಅರ್ಥಹೀನ ಬದುಕಿಗೆ ಮುಂದಾಗುತ್ತಿರುವ ಇಂದಿನ ನಿರುದ್ಯೋಗಿ ಯುವಜನರಿಗೆ ನೆಹರು ಯುವ ಕೇಂದ್ರ ಇಂಥ ತರಬೇತಿ ನೀಡಿ ಅವರಿಗೆ ಉದ್ಯೋಗ ಸೃಷ್ಟಿಸಿಕೊಳ್ಳುವ ಹಾಗೂ ಗಣಕ ಯಂತ್ರದ ಜ್ಞಾನ ಬಿತ್ತರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ಮಾತನಾಡಿ, ವಿಜ್ಞಾನ ಬೆಳೆದಂತೆಲ್ಲ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಿದೆ. ದೇಶದಲ್ಲೀಗ 5ಜಿ ಪ್ಲಾಟಫಾರ್ಮ ನಿರ್ಮಾಣವಾಗಿದೆ. ಯುವಜನರು ಮೊಬೈಲ್ ಬಳಿಕೆ ಮಾಡುತ್ತಿದ್ದು, ಹಲವರು ಕಂಪ್ಯುಟರ್ ಜ್ಞಾನದಿಂದ ವಂಚಿತರಾಗಿರುವರು. ಇತ್ತಿಚೀನ ಸರ್ಕಾರದ ನಿಯಮದಂತೆ ಕಂಪ್ಯುಟರ್ ಜ್ಞಾನ ಬಲ್ಲವರಿಗೆ ನೌಕರಿ ನೀಡುವುದಾಗಿ ಹೇಳುತ್ತಿರುವುದರಿಂದ ಕೆಲವರು ಮಾತ್ರ ಕಂಪ್ಯುಟರ್ ಜ್ಞಾನವನ್ನು ಸೀಮಿತಗೊಳಿಸಿಕೊಂಡಿರುವರು. ಆದರೆ ಇದನ್ನು ಜೀವನದಲ್ಲಿ ಅನಿವಾರ್ಯವಾಗಿಸಿಕೊಂಡಾಗ ಸಾರ್ವತ್ರಿಕವಾಗಿ ಜಿಲ್ಲೆಯ ಯುವಜನರು ಕಂಪ್ಯುಟರ್ ಕಲಿಗಳಾಗಿ ಹೊರ ಹೊಮ್ಮಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಮೂರು ತಿಂಗಳ ವರೆಗೆ ಕಂಪ್ಯುಟರ್ ತರಬೇತಿ ಪಡೆದ ಯುವಜನರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಆರಂಭದಲ್ಲಿ ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಸ್ವಾಗತಿಸಿ, ಆನೀಲ ಜಾಧವ ಕಾರ್ಯಕ್ರಮ ನಿರೂಪಿಸಿ, ರಾಹುಲ ಶಟಕಾರ ವಂದಿಸಿದರು. ಸಂಸ್ಥೆಯ ಸದಸ್ಯರಾದ ನವೀನ ಬೆಳಕೋಟೆ, ಅಮರ ರಾಸೂರೆ, ಅಭಿಲಾಶ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.