ಔಡಲ ಕಟ್ಟಿಗೆಯಿಂದ ಹೊಡೆದು ವ್ಯಕ್ತಿ ಕೊಲೆ: ಮೂವರ ಬಂಧನ

ಕಲಬುರಗಿ,ಫೆ.9-ತಾಲ್ಲೂಕಿನ ಭೀಮಳ್ಳಿ ಗ್ರಾಮದ ಮಶಾಕಸಾಬ್ ಮಕ್ಕಾಸಾಬ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್-ಅರ್ಬನ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭೀಮಳ್ಳಿ ಗ್ರಾಮದ ಶಿವಕುಮಾರ ಅಶೋಕ ಹರಳಯ್ಯ (27), ಬಾಬುರಾವ ಮಲ್ಲೇಶ ಹರಳಯ್ಯ (23) ಮತ್ತು ಶ್ರೀಶೈಲ ಪೀರಪ್ಪ ಜಮಾದಾರ ಎಂಬುವವರನ್ನು ಕಲಬುರಗಿ ನಗರದ ಹೀರಾಪುರ ಕ್ರಾಸ್ ಬಳಿ ಬಂಧಿಸಲಾಗಿದೆ.
ಮಶಾಕಸಾಬ್ ಮಕ್ಕಾಸಾಬ್ ಅವರು ಪಾಂಡುರಂಗ ಮಲ್ಲೇಶ ಜಮಾದಾರ ಅವರ ಜೊತೆ ಉಳ್ಳಾಗಡ್ಡಿ ತುಂಬಿದ ಟ್ರ್ಯಾಕ್ಟರ್ ತೆಗೆದುಕೊಂಡು ಭೀಮಳ್ಳಿ ಗ್ರಾಮದಿಂದ ಭೋಸಗಾ ರಸ್ತೆಯ ಮೂಲಕ ಕಲಬುರಗಿಯ ಮಾರ್ಕೆಟ್‍ಗೆ ಹೋಗುತ್ತಿದ್ದಾಗ ಆರೋಪಿಗಳು ಟ್ರ್ಯಾಕ್ಟರ್ ತಡೆದು ಮಶಾಕ್ ಸಾಬ್ ಅವರೊಂದಿಗೆ ಜಗಳ ತೆಗೆದು ಔಡಲ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು.
ಈ ಸಂಬಂಧ ಮಶಾಕ್ ಸಾಬ್ ಅವರ ಪತ್ನಿ ತಾಹೇರಬಿ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ಮಹ್ಮದ್ ಫಸಿಯೋದ್ದೀನ್ ಅವರ ನೇತೃತ್ವದಲ್ಲಿ ಪಿಎಸ್‍ಐ ಭಾಗಣ್ಣ, ಸಿಬ್ಬಂದಿಗಳಾದ ಅನೀಲ, ನಾಗೇಂದ್ರ, ವಿಶಾಲ್, ಪ್ರಶಾಂತ್ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಲೆ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.