ಔಡಲಲೆಣ್ಣೆ ಟ್ಯಾಂಕರ್ ಲಾರಿ ಪಲ್ಟಿ – ಎಣ್ಣೆ ತುಂಬಿಕೊಳ್ಳಲು ಮುಗಿಬಿದ್ದ ಜನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.15 :- ಬೆಂಗಳೂರು ಕಡೆಯಿಂದ ಗುಜರಾತ್ ಕಡೆಗೆ ಹೊರಟಿದ್ದ ಗುಜರಾತ್ ಮೂಲದ  ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಇಂದು ಬೆಳಿಗ್ಗೆ 10-40ಗಂಟೆಗೆ  ಪಲ್ಟಿಯಾಗಿದ್ದು,ಕಾಲುವೆಯಂತೆ ಹರಿದ ಲಾರಿಯ ಟ್ಯಾಂಕರ್ ನಲ್ಲಿದ್ದ  ಔಡಲೆಣ್ಣೆಯನ್ನು ಕೊಡ ಹಾಗೂ ಬಕೇಟ್ ಗಳಲ್ಲಿ ತುಂಬಿಕೊಂಡು ಹೋಗುವಲ್ಲಿ ಜನಸಾಗರವೇ ಸೇರಿದ ಸನ್ನಿವೇಶ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದ ಹೈವೇ 50ರ ರಸ್ತೆಬದಿ ಕಂಡುಬಂದಿತು.
ಬೆಂಗಳೂರು ಕಡೆಯಿಂದ ಗುಜರಾತ್ ಕಡೆಗೆ ಹೋಗುವ ಗುಜರಾತ್ ಮೂಲದ ಟ್ಯಾಂಕರ್ ಲಾರಿಯಲ್ಲಿ ಔಡಲ ಎಣ್ಣೆ ತುಂಬಿಕೊಂಡು ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಹೊರವಲಯದ ಹೈವೇ ರಸ್ತೆಯಲ್ಲಿ ಕೂಡ್ಲಿಗಿ ಕಡೆಗೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಿರುವಿನಲ್ಲಿ ರಸ್ತೆ ವಿಭಜಕದ ತಗ್ಗಿನಲ್ಲಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಟ್ಯಾಂಕರ್ ನಿಂದ ಎಣ್ಣೆಯು ಕಾಲುವೆಯಂತೆ ಸಾವಿರಾರು ಲೀಟರ ಹರಿದ ಪರಿಣಾಮ ಅದನ್ನು ಕಂಡ ಗ್ರಾಮದ ಜನತೆ ಮನೆಯಲ್ಲಿದ್ದ ಕೊಡ ಬಕೇಟ್ ಗಳನ್ನು ತಂದು ತುಂಬಿಕೊಂಡು ಹೋಗುತ್ತಿದ್ದರು. ಲಾರಿ ಪಲ್ಟಿಯಾದ ಸುದ್ದಿ ತಿಳಿದ ತಕ್ಷಣ ಪೊಲೀಸ್ ಹೈವೇ ಪೆಟ್ರೋಲಿಂಗ್ ವಾಹನ ಹಾಗೂ ಹೊಸಹಳ್ಳಿ ಪೊಲೀಸರು ಧಾವಿಸಿ ಎಣ್ಣೆ ಹೊತ್ತುಕೊಂಡು  ಹೋಗುವುದನ್ನು ನಿಯಂತ್ರಿಸಿ ಲಾರಿಯ ಕ್ಲಿನರ್ ಅಸ್ಲಾಂ ಎಂಬಾತನು ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆಂದು ತಿಳಿದಿದೆ.