ಓ.ಟಿ.ಎಸ್ ಆಶಯದೊಂದಿಗೆ
ರೈತರ ಸತ್ಯಾಗ್ರಹ ತಾತ್ಕಾಲಿಕ ಮುಂದೂಡಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.24: ಓಟಿಎಸ್ (ಒನ್ ಟೈಮ್ ಸೆಟ್ಲಮೆಂಟ್) ಆಶಯದೊಂದಿಗೆ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಛೇರಿ ಮುಂಭಾಗದಲ್ಲಿ ಕಳೆದ 28 ದಿನಗಳಿಂದ ನಡೆಯುತ್ತಿದ್ದ ರೈತರ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು ಮತ್ತು ಚಾಗನೂರು ಸಿರಿವಾರ ಭೂರಕ್ಷಣಾ ಹೋರಾಟ ಸಮಿತಿಯ ಮುಖಂಡ ಚಾಗನೂರು ಮಲ್ಲಿಕಾರ್ಜುನರೆಡ್ಡಿ ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಛೇರಿ ಮುಂಭಾಗದಲ್ಲಿನ ಧರಣಿ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರೈತರ ಆರ್ಥಿಕ ದುಸ್ಥಿತಿಯಿಂದಾಗಿ ಸಾಲಮನ್ನಾ ಮತ್ತು ಹೊಸ ಸಾಲ ನೀಡಿಕೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೂ.27ರಿಂದ ರೈತರಿಂದ ಅನಿರ್ಧಿಷ್ಟಾವಧಿ ಸರದಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗಿತ್ತು.
ದಿನಕ್ಕೊಂದು ಗ್ರಾಮದವರು ತಮ್ಮ ಅನ್ನವನ್ನು ತಾವೇ ತಯಾರಿಸಿಕೊಂಡು ತಿಂದು ಸಾರ್ವಜನಿಕರ ಗಮನ ಸೆಳೆಯುತ್ತಿದ್ದರು. ಬ್ಯಾಂಕಿನ ಅನ್ಯಾಯದ ಬಡ್ಡಿ ಹೇರಿಕೆಗೆ ತಮ್ಮ ವಿರೋಧ ತೋರಿಸಿ, ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ್ತಾ ಬಂದರು, ದಿನ ಕಳೆದಂತೆಲ್ಲ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಬಂದು ಬೆಂಬಲ ನೀಡುತ್ತಿದ್ದುದರಿಂದ ಸತ್ಯಾಗ್ರಹಿಗಳಲ್ಲಿ ಉತ್ಸಾಹ ತುಂಬಿಕೊಂಡಿತು ಎಂದರು.
ಈ ಸತ್ಯಾಗ್ರಹ ಎಲ್ಲ ರಾಜಕೀಯ ಪಕ್ಷಗಳಿಂದ ದೂರ ಕಾಪಾಡಿಕೊಂಡು ಸತ್ಯಾಗ್ರಹದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುತ್ತಾ ಮುಂದುವರೆಯಿತು. ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದ ಹೋರಾಟಕ್ಕೆ ಮಣಿದ ಬ್ಯಾಂಕಿನ ಆಡಳಿತವು ಬಳ್ಳಾರಿ ನಗರದ ಪೊಲೀಸ್ ಉಪ ಆಯುಕ್ತರ ಮಧ್ಯಪ್ರವೇಶದಿಂದ ಒಂದು ತಿಂಗಳ ಕಾಲಾವಕಾಶ ಕೋರಿತು. ಈ ಒಂದು ಅವಕಾಶ ಕೊಟ್ಟು ಕಾಯುವ ತೀರ್ಮಾನದಿಂದಾಗಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನವರು ನಮ್ಮ ಸತ್ಯಾಗ್ರಹಕ್ಕೆ ಮಣಿದು ಲಿಖಿತ ಹೇಳಿಕೆ ನೀಡಿದ್ದು, ನಿಮ್ಮ ಬೇಡಿಕೆಗಳು ನಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರಿಂದ ನಿಮ್ಮ ಮನವಿ ಪತ್ರಗಳನ್ನು ನಮ್ಮ ಶಿಫಾರಸ್ಸಿನೊಂದಿಗೆ ಎಸ್.ಎಲ್.ಬಿ.ಸಿ (ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ), ನಬಾರ್ಡ್ ಮತ್ತು ಆರ್.ಬಿ.ಐ ಗೆ ತಿಳಿಸಿರುತ್ತೇವೆ ಮತ್ತು ಬ್ಯಾಂಕಿನಲ್ಲಿ ಜಾರಿಯಲ್ಲಿ ಇರುವಂತಹ ಓಟಿಎಸ್ ನೀತಿಯ ಪ್ರಕಾರ ಅದಾಲತ್ ನ್ನು, ಮುಂದಿನ ತಿಂಗಳು ಅಂದರೆ ಆಗಸ್ಟ್ ತಿಂಗಳಿಂದ ಸಂಬಂಧಪಟ್ಟ ಶಾಖೆಗಳಲ್ಲಿ ನಿಗದಿಪಡಿಸಿದ ದಿನಾಂಕವನ್ನು ಸಂಬಂಧಪಟ್ಟ ಶಾಖೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಅರ್ಹ ರೈತರು ಇದರ ಸದುಪಯೋಗ ಪಡೆದುಕೊಂಡು ಋಣಮುಕ್ತರಾಗಬಹುದು ಎಂದು ತಿಳಿಸಿದ್ದಾರೆ.
ಓಟಿಎಸ್ ನಲ್ಲಿ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಬ್ಯಾಂಕ್ ತೀರ್ಮಾನವನ್ನು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಸತ್ಯಾಗ್ರಹ ನಡೆಸಲಾಗುವುದಿಲ್ಲ, ರೈತರಿಗೆ ಓಟಿಎಸ್ ನೆರವಾಗದಿದ್ದರೆ ಮತ್ತೆ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.
ಎಸ್.ಬಿ.ಐ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಪ್ರಾಯೋಜಕ ಕೆನರಾ ಬ್ಯಾಂಕು ಮತ್ತಿತರೆ ಬ್ಯಾಂಕುಗಳು ಗಂಟಿನಲ್ಲಿ (ಅಸಲು) ಇಂತಿಷ್ಟೆಂದು ಪಡೆದು ಸಾಲ ಮನ್ನಾ ಮಾಡುತ್ತಿದ್ದರೂ ಈ ಬ್ಯಾಂಕಿನವರು ನಮ್ಮ ಈ ಪ್ರಸ್ತಾಪಕ್ಕೆ ಕವಡೆಯಷ್ಟು ಕಿಮ್ಮತ್ತು ಕೊಟ್ಟಿದ್ದಿಲ್ಲ ವಿಶ್ವಾಸದ ಪ್ರತೀಕ ಎಂದು ಹೇಳಿಕೊಳ್ಳುವ ರೈತನ ಮಿತ್ರ ಎಂದು ಹೇಳಿಕೊಂಡು ಬಂದ ಈ ಬ್ಯಾಂಕು ಅದರಂತೆ ಎಂದೂ ನಡೆದುಕೊಂಡಿದ್ದಲ್ಲ ಎಂದು ಆರೋಪಿಸಿದರು.
ಮಾತುಕೊಟ್ಟಂತೆ ನಡೆದುಕೊಂಡು, ರೈತರಿಗೆ ಅನುಕೂಲಕರವಾದ ನಿರ್ಣಯ ಹೊರಬೀಳದಿದ್ದರೆ ಸತ್ಯಾಗ್ರಹಕ್ಕೆ ಹೊಸರೂಪ ಕೊಟ್ಟು ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಯುತ್ತದೆ. ಅಲ್ಲದೆ ನಮ್ಮ ಬೇಡಿಕೆಯಾದ ಸಾಲಮನ್ನಾ ಹಾಗೂ ಹೊಸ ಸಾಲ ಕೊಡಬೇಕೆಂಬ ಬೇಡಿಕೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಇನ್ನು ಮುಂದೆ ಬ್ಯಾಂಕಿನವರು ರೈತರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರ ರೈತ ಭಾಷೆಯಾದ ಕನ್ನಡದಲ್ಲಿಯೇ ಇರಬೇಕೆಂಬ ಒತ್ತಾಯವೂ ಮುಂದುವರೆಯುತ್ತದೆ ಎಂದರು.
ಬ್ಯಾಂಕಿನ ಮುಂದೆ ಸತ್ಯಾಗ್ರಹ ಮಾಡಿದ್ದರ ಫಲವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದ್ಯೋಗ ಖಾತ್ರಿಯಲ್ಲಿ ಬಂದಂತಹ ಹಣ, ವೃಧ್ಧಾಪ್ಯ ವೇತನ, ವಿಧವಾ ವೇತನ, ಪಿಎಂ ಕಿಸಾನ್ ನಷ್ಟ ಪರಿಹಾರದ ಹಣ ಮೇಲಿಂದ ಮೇಲೆ ಹಾಕುತ್ತಿದ್ದ ಚಾರ್ಜ್ ಗಳು ಈಗಾಗಲೇ ಹರಾಜಿಗೆ ಬಂದಂತಹ ಜಮೀನುಗಳ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿ, ಅವರಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು ಎಂಬ ನಮ್ಮ ಬೇಡಿಕೆಗಳಿಗೆ ಬ್ಯಾಂಕ್ ನವರು ಸ್ಪಂದಿಸಿದ್ದು, ಇಲ್ಲಿ ವೇದಿಕೆ ನಿರ್ಮಾಣವಾಗಿದ್ದರಿಂದ ಸಾಕಷ್ಟು ಜನ ರೈತರ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಲೇಪಾಕ್ಷಿ, ರೈತ ಮುಖಂಡರಾದ ಕಾಳಿದಾಸ್, ಭೈರಪುರ ತಿಮ್ಮನಗೌಡ, ಬಸವರಾಜಯ್ಯಸ್ವಾಮಿ, ಮೀನಾಕ್ಷಿ, ರಾಧಾ, ನಾಗವೇಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.